ಕೊರೊನಾಗೆ ನೋ ವರಿ, ಮಾಸ್ಕ್ ಕೂಡ ಬೇಡ ರೀ... ಅನ್ನುವಂತಿದೆ ಜನರ ನಡೆ; ಜಿಲ್ಲಾಡಳಿತಕ್ಕೂ ಇಲ್ಲವೆ ಚಿಂತೆ..!! - ಕೋವಿಡ್ ನಿಯಮಗಳ ಉಲ್ಲಂಘನೆ
ಕೋವಿಡ್ ಆರಂಭದ ಹೊಸ್ತಿಲಿನಲ್ಲಿ ಬಿಗಿ ನಿಯಮ, ತೀವ್ರ ಕಟ್ಟೆಚ್ಚರದ ಪರಿಣಾಮ ಕೊರೊನಾ ಸೋಂಕು ಪತ್ತೆಯಾಗದ ಕರ್ನಾಟಕದ ಏಕೈಕ ಜಿಲ್ಲೆಯಾಗಿದ್ದ ಚಾಮರಾಜನಗರದಲ್ಲಿ ಈಗ ವಾತಾವರಣವೇ ಬೇರೆಯಾಗಿದ್ದು ಪ್ರವಾಸಿ ತಾಣಗಳು, ಜಿಲ್ಲಾಕೇಂದ್ರದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವವರೇ ಇಲ್ಲದ್ದನ್ನು ಕಂಡಾಗ ಸೋಂಕು ಹೆಚ್ಚುವ ಕಳವಳ ಪ್ರಜ್ಞಾವಂತರಲ್ಲಿ ಮನೆ ಮಾಡಿದೆ.
![ಕೊರೊನಾಗೆ ನೋ ವರಿ, ಮಾಸ್ಕ್ ಕೂಡ ಬೇಡ ರೀ... ಅನ್ನುವಂತಿದೆ ಜನರ ನಡೆ; ಜಿಲ್ಲಾಡಳಿತಕ್ಕೂ ಇಲ್ಲವೆ ಚಿಂತೆ..!! Chamarajanagar](https://etvbharatimages.akamaized.net/etvbharat/prod-images/768-512-14087981-582-14087981-1641243209231.jpg)
ಚಾಮರಾಜನಗರ: ಕೊರೊನಾ ಮೂರನೇ ಅಲೆ ಭೀತಿ, ತಮಿಳುನಾಡು, ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಕೇಸ್ ಗಳ ಮಧ್ಯೆಯೂ ಜನರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವಿಲ್ಲದೇ ಸಂಚರಿಸುತ್ತಿದ್ದು ಆರೋಗ್ಯ ಇಲಾಖೆಯಾಗಲಿ, ನಗರಸಭೆಯಾಗಲಿ ತಲೆಕೆಡಿಸಿಕೊಂಡಿಲ್ಲದ ವಾತಾವರಣ ಇದೆ.
ಕೋವಿಡ್ ತಡೆಗೆ ಸರ್ಕಾರ ಬಿಗಿ ನಿಯಮಗಳನ್ನು ಜಾರಿ ಮಾಡಿದ್ದರೂ ಜನರು ಯಾವುದೇ ಭೀತಿ ಇಲ್ಲದೆ ಗುಂಪು ಗುಂಪಾಗಿ ಅಗತ್ಯ ವಸ್ತುಗಳ ಖರೀದಿಯಲ್ಲಿ ಹಾಗೂ ಓಡಾಟದಲ್ಲಿ ತೊಡಗಿಕೊಂಡಿದ್ದು, ಕನಿಷ್ಠ ಮಾಸ್ಕ್ ಧರಿಸುವುದು ಕೂಡ ಮರೆತಂತಿದ್ದು ಅರಿವು ಮೂಡಿಸಬೇಕಾದ ಅಧಿಕಾರಿಗಳು ಸುಮ್ಮನಿದ್ದಾರೆ. ಪ್ರಾರಂಭದಲ್ಲಿದ್ದ ಆತಂಕ ಇದೀಗ ಕಡಿಮೆ ಯಾಗಿದ್ದು ಡೋಂಟ್ ಕೇರ್ ಮನೋಭಾವ ಪ್ರದರ್ಶನವಾಗುತ್ತಿದ್ದರು ನಗರಸಭೆ ಅಧಿಕಾರಿಗಳು ಮಾಸ್ಕ್ ಧಾರಣೆಯ ಕಟ್ಟುನಿಟ್ಟಿನ ಜಾರಿಗೆ ಮುಂದಾಗಿಲ್ಲದಿರುವುದು ವಿಷಾಧನೀಯ.