ಚಾಮರಾಜನಗರ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 24 ಗಂಟೆಯಲ್ಲಿ 24 ಕೋವಿಡ್ ಸೋಂಕಿತರು ಮೃತಪಟ್ಟಿರುವ ಘೋರ ದುರಂತ ಬಗ್ಗೆ ಇಂದಿನಿಂದಲೇ ತನಿಖೆ ಆರಂಭವಾಗಿದ್ದು, ತನಿಖಾಧಿಕಾರಿ ಕೆಎಸ್ಆರ್ಟಿಸಿ ಎಂ.ಡಿ ಶಿವಯೋಗಿ ಕಳಸದ್ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ.
ಕೋವಿಡ್ ರೋಗಿಗಳ ಸಾವಿಗೆ ನಿಜವಾದ ಕಾರಣವೇನು, ಎಷ್ಟು ಮಂದಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದಾರೆ, ದುರಂತದ ಹಿಂದೆ ಯಾರ ನಿರ್ಲಕ್ಷ್ಯವಿದೆ ಎಂಬೆಲ್ಲಾ ವಿಷಯಗಳ ಬಗ್ಗೆ IAS ಅಧಿಕಾರಿ ಮಾಹಿತಿ ಕಲೆ ಹಾಕಲಿದ್ದಾರೆ.
ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಆರೋಗ್ಯ ಸಚಿವ ಡಾ.ಕೆ ಸುಧಾಕರ್, ಆಮ್ಲಜನಕ ಕೊರತೆಯಿಂದ ಕೇವಲ ಮೂರು ಮಂದಿ ಮಾತ್ರ ಮೃತಪಟ್ಟಿದ್ದಾರೆ. ಇನ್ನುಳಿದ 21 ಮಂದಿ ಬೇರೆ ಕಾರಣಗಳಿಂದ ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದರು. ಹಾಗಾಗಿ, ವಿಶೇಷ ತನಿಖೆಯ ಮೇಲೆ ಸಾರ್ವಜನಿಕರಿಗೆ ಯಾವುದೇ ಭರವಸೆಯ ಇಲ್ಲದಂತಾಗಿದೆ. ತನಿಖೆಯ ಮೂಲಕ ಘಟನೆಗೆ ಯಾರನ್ನೂ ಹೊಣೆ ಮಾಡದೆ ತಿಪ್ಪೆ ಸಾರಿಸುವ ಕೆಲಸ ನಡೆಯಬಹುದು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಇದನ್ನೂಓದಿ: ನೈತಿಕ ಹೊಣೆ ಹೊತ್ತು ಸುಧಾಕರ್ ರಾಜೀನಾಮೆ ನೀಡಲಿ: ಡಿ.ಕೆ ಸುರೇಶ್
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಭಾನುವಾರದಿಂದ ಸೋಮವಾರದೊಳಗೆ 24 ಗಂಟೆಗಳ ಅವಧಿಯಲ್ಲಿ 24 ಕೋವಿಡ್ ಸೋಂಕಿತರು ಮೃತಪಟ್ಟಿದ್ದರು. ಆಕ್ಸಿಜನ್ ಕೊರತೆಯಿಂದಲೇ ರೋಗಿಗಳು ಮೃತಪಟ್ಟಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.