ಚಾಮರಾಜನಗರ:ಚಾಮರಾಜನಗರದ ವಿವಿಧೆಡೆ ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್ಗಳನ್ನು ತೆರವುಗೊಳಿಸಿ, ಅಳವಡಿಸಿರುವವರ ವಿರುದ್ದ ಅಗತ್ಯ ಕ್ರಮ ಜರುಗಿಸುವಂತೆ ನಗರಸಭೆ ಸದಸ್ಯರು ಪಟ್ಟುಹಿಡಿದರು.
ನಗರದ ನಗರಸಭೆಯಲ್ಲಿ ಇಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅನಧಿಕೃತ ಫ್ಲೆಕ್ಸ್ ಗಳ ತೆರವಿಗೆ ಪಟ್ಟುಹಿಡಿದರು. ಫ್ಲೆಕ್ಸ್ ಮುಕ್ತ ನಗರವನ್ನಾಗಿ ಮಾಡಲು ಹಿಂದೆ ನಗರಸಭೆಯಿಂದಲೇ ಆದೇಶಮಾಡಲಾಗಿತ್ತು. ಆದರೆ, ನಗರದ ಪ್ರಮುಖ ವೃತಗಳಲ್ಲೇ ಫ್ಲೆಕ್ಸ್ ಗಳನ್ನು ಅನಧಿಕೃತವಾಗಿ ಅಳವಡಿಸಲಾಗುತ್ತಿದೆ. ಇದನ್ನು ತಡೆಯುವಲ್ಲಿ ನಗರಸಭೆ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸದಸ್ಯ ಮಹೇಶ್ ಗುಡುಗಿದರು.
ವೃತ್ತಗಳು ಹಾಗೂ ರಸ್ತೆಗಳಲ್ಲಿ ಫ್ಲೆಕ್ಸ್ ಗಳನ್ನು ಅಳವಡಿಸುವುದರಿಂದ ನಗರದ ಸೌಂದರ್ಯ ಹಾಳಾಗುತ್ತಿದೆ. ಜೊತೆಗೆ ಫ್ಲೆಕ್ಸ್ ಗಳಿಂದಾಗಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಫ್ಲೆಕ್ಸ್ ಅಳವಡಿಸುವ ಸಂಬಂಧ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರು ಹಾಗೂ ಅಧ್ಯಕ್ಷರ ಗಮನಕ್ಕೆ ತಂದರು.
ನಗರದಲ್ಲಿ ಯಾವುದೇ ಕಾರ್ಯಕ್ರಮ ನಡೆದರು ಆ ಸಂಬಂಧ ಫ್ಲಕ್ಸ್ ಅಳವಡಿಸಲು ನಗರಸಭೆಯಿಂದ ಅನುಮತಿ ಪಡೆಯದೇ ಅನಧಿಕೃತವಾಗಿ ಫ್ಲೆಕ್ಸ್ ಹಾಕುತ್ತಿದ್ದಾರೆ. ನಗರಸಭೆಯ ಅನುಮತಿ ಇಲ್ಲದೇ ಅನಧಿಕೃತವಾಗಿ ಫೆಕ್ಸ್ ಅಳವಡಿಸಿದರೆ ನಗರಸಭೆಗೆ ಆದಾಯ ಬರುವುದಿಲ್ಲ. ಹೀಗಾಗಿ ಪ್ರಸ್ತುತ ಅಳವಡಿಸಿರುವ ಫ್ಲೆಕ್ಸ್ ಗಳನ್ನು ಅನಧಿಕೃತ ಎಂದು ಪರಿಗಣಿಸಿ, ಅಳವಡಿಸಿರುವವರ ವಿರುದ್ದ ಕ್ರಮ ಜರುಗಿಸುವಂತೆ ಸದಸ್ಯ ಅಬ್ರಾರ್ ಅಹಮದ್ ಒತ್ತಾಯಿಸಿದರು.
ಪೌರಾಯಕ್ತ ಎಂ.ರಾಜಣ್ಣ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಜನಪ್ರತಿನಿಧಿಗಳ ಸಭೆ ನಡೆದಿರಲಿಲ್ಲ. ಇಂದು ನಡೆಯುತ್ತಿರುವ ಸಭೆಯಲ್ಲಿ ಅನಧಿಕೃತ ಫ್ಲೆಕ್ಸ್ ಅಳವಡಿಸುತ್ತಿರುವ ಸಂಬಂಧ ಸಭಾ ನಡಾವಳಿ ಮಾಡಿ,ಮುಂದಿನ ದಿನಗಳಲ್ಲಿ ಅದನ್ನು ತಡೆಗಟ್ಟಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ನಗರಸಭೆ ವತಿಯಿಂದ ಸನ್ಮಾನಗಳಿಗೆ ಹೆಚ್ಚಿನ ದುಂದು ವೆಚ್ಚವಾಗುತ್ತಿದೆ. ವಿವಿಧ ಜನಪ್ರತಿನಿಧಿಗಳ ಸನ್ಮಾನಕ್ಕಾಗಿ ಈಗಾಗಲೇ ನಗರಸಭೆಯ ಎರಡು ಲಕ್ಷ ಹಣವನ್ನು ದುಂದುವೆಚ್ಚಮಾಡಲಾಗಿದೆ. ಇಂತಹ ಕೆಲಸಗಳಿಗೆ ತಡೆಯಾಗಬೇಕು ಎಂದು ಸದಸ್ಯರು ಪಟ್ಟುಹಿಡಿದರು.