ದೇವರ ಹೆಸರಿನಲ್ಲಿ ಚಿಲ್ಲರೆ ರಾಜಕೀಯ ಮಾಡಬಾರದು: ಸಚಿವ ಸೋಮಣ್ಣ ಚಾಮರಾಜನಗರ:ಊರಿನ ದೇಗುಲಕ್ಕೆ ರಥ ನಿರ್ಮಾಣ ಹಾಗೂ ಜೀರ್ಣೋದ್ಧಾರ ಮಾಡದಿದ್ದರೇ ‘ಗೋ ಬ್ಯಾಕ್’ ಸೋಮಣ್ಣ ಚಳವಳಿ ನಡೆಸುತ್ತೇವೆಂದು ಎಚ್ಚರಿಸಿದ್ದ ಚಾಮರಾಜನಗರ ತಾಲೂಕಿನ ಚನ್ನಪ್ಪನಪುರ, ಅಮಚವಾಡಿ ಗ್ರಾಮಸ್ಥರೊಟ್ಟಿಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಸಭೆ ನಡೆಸಿದರು.
ಸಭೆ ಆರಂಭದಿಂದಲೇ ವಿಜಯೇಂದ್ರ ಆಪ್ತ ಹಾಗೂ ಚಾಮರಾಜನಗರ ಬಿಜೆಪಿ ಟಿಕೆಟ್ ಆಕಾಂಕ್ಷಿ ರುದ್ರೇಶ್ ಹೆಸರೇಳದೇ ಪರೋಕ್ಷವಾಗಿ ಹಿಗ್ಗಾಮುಗ್ಗ ಜಾಡಿಸಿದ ಸೋಮಣ್ಣ ಬೆಂಗಳೂರಿನಿಂದ ಬಂದವರು ಬೋರ್ಡ್ ತಂದು ಕೊಟ್ಟರು, ನೀವು ಹಿಡ್ಕೊಂಡ್ರಿ, ಸುಳ್ಳುಗಾರ ಸೋಮಣ್ಣ ಎಂದು ಹೇಳಲು ನಿಮಗೆ ಮನಸಾದರೂ ಹೇಗೆ ಬಂತು? ಕೆಲ ತರ್ಲೆಗಳು ಮಾತು ಕಟ್ಟಿಕೊಂಡು ನನಗೆ ಉಗಿದಿದ್ದೀರಿ ಎಂದು ಗ್ರಾಮಸ್ಥರನ್ನು ತರಾಟೆಗೆ ತೆಗೆದುಕೊಂಡರು.
ದೇವರ ಹೆಸರಿನಲ್ಲಿ ಚಿಲ್ಲರೆ ರಾಜಕೀಯ ಮಾಡಬಾರದು, ದೇವರ ಹೆಸರಲ್ಲಿ ರಾಜಕೀಯ ಮಾಡುವವರು ಹೆಚ್ಚು ದಿನ ಉಳಿಯಲಾರರು, 45 ವರ್ಷಗಳ ರಾಜಕೀಯ ಜೀವನದಲ್ಲಿ ಇಷ್ಟು ನನಗೆ ಅವಮಾನ ಆಗಿರಲಿಲ್ಲ ಎಂದು ನೋವು ತೋಡಿಕೊಂಡರು.
ಏಕೆ ಈ ನೋವಿನ ಮಾತು: ಚಾಮರಾಜನಗರ ತಾಲೂಕಿನ ಚೆನ್ನಪ್ಪನಪುರ ಗ್ರಾಮದಲ್ಲಿ 400 ವರ್ಷ ಪುರಾತನವಾದ ವೀರಭದ್ರೇಶ್ವರ ಸ್ವಾಮಿ ದೇಗುಲವಿದೆ. ಈ ಐತಿಹಾಸಿಕ ದೇವಾಲಯ ಶಿಥಿಲಗೊಂಡಿದ್ದು ರಥವೂ ಕೂಡ ಹಾಳಾಗಿದೆ. ಗ್ರಾಮಕ್ಕೆ ಸಚಿವ ಸೋಮಣ್ಣ ಬಂದಿದ್ದ ವೇಳೆ ದೇಗುಲ ಜೀರ್ಣೋದ್ಧಾರ ಮಾಡಲು ಕ್ರಮ ವಹಿಸುತ್ತೇನೆ ಜೊತೆಗೆ ರಥ ಮಾಡಿಸಿಕೊಡುತ್ತೇನೆ ಎಂದು ವಿ ಸೋಮಣ್ಣ ಭರವಸೆ ಕೊಟ್ಟಿದ್ದರು.
ಆದರೆ, ಸುತ್ತಮುತ್ತಲಿನ ಗ್ರಾಮದ ಒಟ್ಟು 24 ಕೋಮುಗಳ ಮುಖಂಡರು ಸೋಮಣ್ಣ ಅವರನ್ನು ನಗರದಲ್ಲಿ ಮತ್ತು ಬೆಂಗಳೂರಿನಲ್ಲಿ ಭೇಟಿ ಮಾಡಿದ್ದ ವೇಳೆ ಅಸೌಜನ್ಯದಿಂದ ನಡೆದುಕೊಂಡು ತಿರಸ್ಕಾರದಿಂದ ಕಂಡರು ಎಂಬುದು ಗ್ರಾಮಸ್ಥರ ಸಿಟ್ಟಾಗಿತ್ತು. ಇದರಿಂದಾಗಿ ‘ಗೋ ಬ್ಯಾಕ್’ ಸೋಮಣ್ಣ ಎಂದು ಚಳವಳಿ ನಡೆಸಲಾಗುವುದು ಎಂದು ಆಕ್ರೋಶ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸೋಮಣ್ಣ ಗ್ರಾಮಸ್ಥರ ಜೊತೆ ಸಭೆ ನಡೆಸಿದರು.
ಫಲಾನುಭವಿಗಳ ಸಮಾವೇಶ ನಡೆಸಿದ ಸೋಮಣ್ಣ:ಹಳೇ ಮೈಸೂರು ಭಾಗದ ಚುನಾವಣಾ ಉಸ್ತುವಾರಿ ಪಡೆದಿರುವ ವಸತಿ ಸಚಿವ ಸೋಮಣ್ಣ ಅಖಾಡಕ್ಕೆ ಇಳಿದಿದ್ದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಫಲಾನುಭವಿಗಳ ಸಮಾವೇಶ ನಡೆಸಿದರು. ಗುಂಡ್ಲುಪೇಟೆ ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ ಫಲಾನುಭವಿ ಸಮಾವೇಶದಲ್ಲಿ ಜಿಲ್ಲಾದ್ಯಂತ ಆಯ್ಕೆಯಾಗಿದ್ಧ ಫಲಾನುಭವಿಗಳಿಗೆ ವಾಹನಗಳು ಸೇರಿದಂತೆ ಇತರೆ ಸಾಧನ ಸಲಕರಣೆಗಳನ್ನು ಸೋಮಣ್ಣ ವಿತರಣೆ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಸೋಮಣ್ಣ, ‘‘ಜನರ ಜೀವನ ಉತ್ತಮಗೊಳಿಸಲು ಕೇಂದ್ರ ಮತ್ತು ರಾಜ್ಯದ ಡಬಲ್ ಇಂಜಿನ್ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅರ್ಹ ಫಲಾನುಭವಿಗಳಿಗೆ ನೇರವಾಗಿ ಬ್ಯಾಂಕ್ ಖಾತೆ ಜಮಾ ಮಾಡಲಾಗುತ್ತಿದ್ದು ಯೋಜನೆ ಹಣ ಸೋರಿಕೆಯಾಗದೇ ಸಂಪೂರ್ಣವಾಗಿ ಜನರಿಗೆ ತಲುಪುತ್ತಿದೆ ಎಂದರು.
ಇದನ್ನೂ ಓದಿ:ಜೆಡಿಎಸ್ ಭದ್ರಕೋಟೆ ಒಡೆದಿದೆ, ಛಿದ್ರ ಮಾಡೋದೊಂದೇ ಬಾಕಿ: ಸಂಸದೆ ಸುಮಲತಾ ಅಂಬರೀಶ್