ಮೈಸೂರು: ಚಾಮರಾಜನಗರ ಲೋಕಸಭಾ ಕ್ಷೇತ್ರದ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆಗೆ ನಾನು ಕೂಡ ಆಕಾಂಕ್ಷಿ ಎಂದು ಬಿಜೆಪಿ ಮುಖಂಡ ಕೆ.ಶಿವರಾಮ್ ಹೇಳಿದರು. ನಂಜನಗೂಡು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಬಿಜೆಪಿ ಪಕ್ಷದ ಮುಖಂಡರು ಮತ್ತು ಸಂಘಟನೆಯ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಪಕ್ಷದ ಹಿರಿಯ ಮುಖಂಡ ಕೆ ಶಿವರಾಮ್ ಮಾತನಾಡಿದರು. ಮುಂದಿನ ಲೋಕಸಭಾ ಚುನಾವಣೆಗೆ ಹಾಲಿ ಸಂಸದರಾಗಿರುವ ವಿ ಶ್ರೀನಿವಾಸ್ ಪ್ರಸಾದ್ ಸ್ಪರ್ಧಿಸುವುದಿಲ್ಲ. ಹಾಗಾಗಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ನಮ್ಮ ತಂದೆಯ ತವರೂರು. ಚಾಮರಾಜನಗರ ಲೋಕಸಭಾ ಕ್ಷೇತ್ರದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಟಿಕೆಟ್ ಆಕಾಂಕ್ಷಿಯಾಗಲಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ನನ್ನ ಸ್ಪರ್ಧೆಯ ವಿಚಾರವನ್ನು ಬಿಜೆಪಿ ಪಕ್ಷದ ಹಿರಿಯ ಮುಖಂಡರ ಜೊತೆ ಚರ್ಚೆ ಮಾಡಿದ್ದೇನೆ. ಪಕ್ಷದ ಹಿರಿಯ ಮುಖಂಡರು ಕೂಡ ನನ್ನ ಸ್ಪರ್ಧೆಗೆ ಒಲವು ತೋರಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ನನಗೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಅವಕಾಶ ನೀಡುವ ಭರವಸೆ ನೀಡಿದ್ದಾರೆ. ಮುಂದಿನ ಚಾಮರಾಜನಗರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ, ನಾನು ಗೆಲುವು ಸಾಧಿಸಿದರೆ ಚಾಮರಾಜನಗರ ಜಿಲ್ಲೆಯ ಚಿತ್ರಣವನ್ನೇ ಬದಲು ಮಾಡುತ್ತೇನೆ ಎಂದು ಭರವಸೆ ನೀಡಿದರು.
ನಿರುದ್ಯೋಗದ ಸಮಸ್ಯೆ ನಿವಾರಣೆಗೆ ಆದ್ಯತೆ: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ನಿರುದ್ಯೋಗದ ಸಮಸ್ಯೆ ಬಹಳಷ್ಟಿದೆ. ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ವಿವಿಧ ಕಾರ್ಖಾನೆಗಳನ್ನು ತರಲು ಪ್ರಯತ್ನಿಸುತ್ತೇನೆ. ನಿರುದ್ಯೋಗ ಸಮಸ್ಯೆ ಮತ್ತು ವಿವಿಧ ಕಾರ್ಖಾನೆಯ ನಿರ್ಮಾಣ ನನ್ನಿಂದ ಸಾಧ್ಯವಾಗದ ಪಕ್ಷದಲ್ಲಿ ಅಂದೆ ನಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ತಿಳಿಸಿದರು.