ಚಾಮರಾಜನಗರ :ಸಮಯಕ್ಕೆ ಸರಿಯಾಗಿ ಕೂಲಿ ಕಾರ್ಮಿಕರು ಸಿಗದೆ ಸಿಕ್ಕಂತಹ ಕಾರ್ಮಿಕರೊಂದಿಗೆ ದುಬಾರಿ ವೆಚ್ಚದಲ್ಲಿ ಸಾಂಪ್ರದಾಯಿಕ ನಾಟಿ ಪದ್ಧತಿ ಮಾಡಿಕೊಂಡು ನೀರು, ಸಮಯ ಹಾಗೂ ಇಳುವರಿಯನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದ ರೈತರಿಗೆ ಕೃಷಿ ವಿಜ್ಞಾನ ಕೇಂದ್ರ ಪರಿಚಯಿಸಿಕೊಟ್ಟ 'ಡ್ರಮ್ ಸೀಡರ್’ ನಾಟಿ ಪದ್ಧತಿ ನೆರವಾಗಿದೆ.
ಸಾಕಷ್ಟು ಮಳೆಯೊಂದಿಗೆ ಭತ್ತದ ಜಮೀನಿಗಿಳಿದಿರುವ ರೈತರು ಸಸಿಮಡಿಗಳ ನಿರ್ಮಾಣ, ಗದ್ದೆ ನಾಟಿಯ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಆದರೆ, ಯಳಂದೂರು ತಾಲೂಕಿನ ಕಟ್ನವಾಡಿ ಗ್ರಾಮದ ರೈತ ಮಾತ್ರ ಹಳೆ ಸಾಂಪ್ರದಾಯಿಕ ನಾಟಿ ಪದ್ಧತಿಗೆ ಮಂಗಳ ಹಾಡಿ ‘ಡ್ರಮ್ ಸೀಡರ್’ ಎಂಬ ಹೊಸ ನಾಟಿ ಪದ್ಧತಿಯತ್ತ ಮುಖ ಮಾಡಿದ್ದು, ಏಳೆಂಟು ಜನರು ಮಾಡುವ ನಾಟಿ ಕೆಲಸವನ್ನು ಒಬ್ಬರೆ ಮಾಡುತ್ತಿದ್ದಾರೆ.
ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಡಾ.ಸುನಿಲ್ ಅವರು ಜಿಲ್ಲೆಗೆ ‘ಡ್ರಮ್ ಸೀಡರ್’ ನಾಟಿ ಪದ್ಧತಿ ಪರಿಚಯಿಸಿದ್ದಾರೆ. ಈ ಪದ್ಧತಿಯಲ್ಲಿ ಸಸಿಮಡಿ ನಿರ್ಮಾಣ, ಸಸಿ ಕಿತ್ತು ನಾಟಿ ಮಾಡುವ ಪದ್ಧತಿಗಳಿಲ್ಲದ ಕಾರಣ ಭತ್ತದ ಕೃಷಿಯ ವೆಚ್ಚ ತಗ್ಗಿಸಲು ‘ಡ್ರಮ್ ಸೀಡರ್’ ನಾಟಿ ಪದ್ಧತಿಯು ರೈತರಿಗೆ ನೆರವಾಗುತ್ತಿದೆ.
ಡ್ರಮ್ ಸೀಡರ್ ಪದ್ಧತಿ ಅಂದರೆ..
ಮೊಳಕೆಯೊಡೆದ ಭತ್ತವನ್ನು ಕೈ ಯಂತ್ರದ ಮೂಲಕ ನೇರವಾಗಿ ಬಿತ್ತನೆ ಮಾಡುವ ಪದ್ಧತಿಯನ್ನೇ ಡ್ರಮ್ ಸೀಡರ್ ಪದ್ಧತಿ ಎನ್ನಲಾಗುತ್ತದೆ. ನಾಲ್ಕು ಡ್ರಮ್‌ಗಳನ್ನು ಒಳಗೊಂಡ ಎರಡು ಚಕ್ರದ ಗಾಡಿಯಂತಹ ಯಂತ್ರದೊಳಗೆ ಮೊಳಕೆ ಬಂದ ಭತ್ತಗಳನ್ನು ಹಾಕಿ, ಭತ್ತದ ಗದ್ದೆಯಲ್ಲಿ ಈ ಯಂತ್ರವನ್ನು ಕೈಯಿಂದ ಎಳೆಯುವ ಮೂಲಕ, ನಾಟಿ ಮಾಡುವುದು ಈ ಪದ್ಧತಿಯ ವಿಶೇಷ. ಪ್ರತಿ ಎಕರೆಗೆ ಬಿತ್ತನೆ ಮಾಡಲು 14-15 ಕೆಜಿ ಬಿತ್ತನೆ ಬೀಜ ಬಳಸುತ್ತಿದ್ದ ರೈತರಿಗೆ ಡ್ರಮ್ ಸೀಡರ್ ಪದ್ಧತಿಯಲ್ಲಿ ಒಂದು ಎಕರೆಗೆ ಕೇವಲ 10 ಕೆಜಿ ಬಿತ್ತನೆ ಬೀಜ ಸಾಕಾಗಲಿದೆ.
ಒಂದೇ ಪ್ರಮಾಣದಲ್ಲಿ ನಾಟಿ :
ಮೊಳಕೆಯೊಡೆದ ಬೀಜದ ಭತ್ತವನ್ನು ಡ್ರಮ್ ಸೀಡರ್ ಯಂತ್ರದಲ್ಲಿರುವ ನಾಲ್ಕು ಡ್ರಮ್‌ಗಳಿಗೆ ಮುಕ್ಕಾಲು ಭಾಗದಷ್ಟು ಸಮನಾಗಿ ತುಂಬಿ, ಭತ್ತವು ಚೆಲ್ಲದಂತೆ ಯಂತ್ರದಲ್ಲಿರುವ ಕೀಲಿಯನ್ನು ಭದ್ರಪಡಿಸಿಕೊಂಡು, ನಾಟಿಗಾಗಿ ಸಿದ್ಧವಾಗಿರುವ ಭತ್ತದ ಗದ್ದೆಯಲ್ಲಿ ಯಂತ್ರವನ್ನು ಎಳೆಯಬೇಕು. ಯಂತ್ರದ ಡ್ರಮ್‌ಗಳಲ್ಲಿರುವ ಕಿಂಡಿಗಳ ಮೂಲಕ ಮೊಳಕೆಯೊಡೆದ ಭತ್ತವು ಜಮೀನಿಗೆ ನಿಗದಿತ ಪ್ರಮಾಣದಲ್ಲಿ ಬಿದ್ದು ಬಿತ್ತನೆಯಾಗುತ್ತದೆ. ಯಂತ್ರದಲ್ಲಿರುವ ಚಕ್ರದ ಗುರುತಿನಲ್ಲಿಯೇ ಚಲಿಸಿದಾಗ ಇಡೀ ಗದ್ದೆಯು ಒಂದೇ ಪ್ರಮಾಣದಲ್ಲಿ ನಾಟಿಯಾಗುತ್ತದೆ.