ಚಾಮರಾಜನಗರ:ಚಾಮರಾಜನಗರ ಜಿಲ್ಲಾ ಕೇಂದ್ರದ ಮುಖ್ಯರಸ್ತೆಗಳು ಹಾಗೂ ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಸಂಚಾರ ದುಸ್ತರವಾಗಿದೆ. ಅಲ್ಲದೆ ಹೆದ್ದಾರಿಯಲ್ಲೇ ಮ್ಯಾನ್ಹೋಲ್ ಬಾಯ್ತೆರೆದು ಅಪಾಯಕ್ಕೆ ಆಹ್ವಾನಿಸುತ್ತಿವೆ. ನ್ಯಾಯಾಲಯ ಮತ್ತು ಜೋಡಿ ರಸ್ತೆಯ ಇಕ್ಕೆಲಗಳಲ್ಲಿ ಮರಳಿನ ರಾಶಿ ತುಂಬಿದೆ.
ಸುಗಮ ಸಂಚಾರಕ್ಕೆ ಸಂಪರ್ಕ ಕಲ್ಪಿಸಬೇಕಾದ ರಸ್ತೆಗಳ ದುಸ್ಥಿತಿಯಿಂದ ಅಪಘಾತಗಳ ಸಂಖ್ಯೆ ಅಧಿಕವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲೇ ಮ್ಯಾನ್ಹೋಲ್ ತೆರೆದುಕೊಂಡಿದೆ. ಅಲ್ಲದೆ, ನ್ಯಾಯಾಲಯ ರಸ್ತೆ, ಕರಿನಂಜನಪುರಕ್ಕೆ ತೆರಳುವ ರಸ್ತೆ, ಅಂಗಡಿ ಬೀದಿ ರಸ್ತೆಗಳಲ್ಲಿಯೂ ಅದೇ ಸಮಸ್ಯೆ ಎದ್ದು ಕಾಣುತ್ತಿದೆ. ಇದರಿಂದ ವಾಹನ ಸವಾರರು ಸಂಚರಿಸಲು ಹೆದರುವಂತಾಗಿದೆ.
ರಸ್ತೆಗಳ ರಿಪ್ಲೆಕ್ಟರ್ಗಳ ಮೇಲೆ ಕಾರುಗಳು ಚಲಿಸಿದರೇ ಕಿತ್ತು ಬರುವಷ್ಟರ ಮಟ್ಟಿಗೆ ಗುಣಮಟ್ಟ ಕಾಯ್ದುಕೊಂಡಿದ್ದಾರೆ. ಇದು ಗುತ್ತಿಗೆ ಪಡೆದ ಗುತ್ತಿಗೆದಾರರ ಕೆಲಸವನ್ನು ಎತ್ತಿ ತೋರಿಸುತ್ತದೆ. ಅಷ್ಟೇ ಅಲ್ಲದೆ, ರಸ್ತೆ ಬದಿಯಲ್ಲಿ ಮರಳು ಹರಡಿರುವ ಕಾರಣ ಹೆಚ್ಚಾಗಿ ಬೈಕ್ಗಳು ಸ್ಕಿಡ್ ಆಗುತ್ತಿವೆ. ಆದ್ದರಿಂದ ದ್ವಿಚಕ್ರ ವಾಹನ ಸವಾರರು ಜೀವ ಪಣಕಿಟ್ಟು ವಾಹನ ಚಲಾಯಿಸುವಂತಾಗಿದೆ.
ಈ ಕುರಿತು ಸಾಮಾಜಿಕ ಕಾರ್ಯಕರ್ತ ಸಿ.ಎಂ.ಕೃಷ್ಣಮೂರ್ತಿ ಮಾತನಾಡಿ, ಕಳಪೆ ಕಾಮಗಾರಿಯೇ ಇದಕ್ಕೆಲ್ಲಾ ಕಾರಣ. ಇದರ ಬಗ್ಗೆ ಯಾವೊಬ್ಬ ಅಧಿಕಾರಿಗಳು ಗಮನ ಕೊಡುತ್ತಿಲ್ಲ. ರಸ್ತೆಗಳೆಲ್ಲ ಹದಗೆಟ್ಟು ಹಳ್ಳಕೊಳ್ಳಗಳಾಗಿವೆ. ಆದರೂ ಜನಪ್ರತಿನಿಧಿಗಳು, ಜಿಲ್ಲಾ ವಸ್ತುವರಿ, ಸಂಸದರು ಕೂಡಲೇ ಸಮಸ್ಯೆಗೆ ಪರಿಹಾರ ಕೊಡಬೇಕು. ಈ ಕಳಪೆ ಕಾಮಗಾರಿಗೆ ಕಾರಣರಾಗಿರುವ ಗುತ್ತಿಗೆದಾರರ ಮೇಲೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಕರಿನಂಜನಪುರದ ರಸ್ತೆಯಲ್ಲಿನ ಮ್ಯಾನ್ಹೋಲ್ ಬಾಯ್ತೆರೆದು 15 ದಿನಗಳಾಗಿದೆ. ರಂಜಾನ್ ದಿನ ಬೈಕ್ ಒಂದು ಸಿಕ್ಕಿಕೊಂಡಿತ್ತು. ಅದನ್ನು ಎಳೆಯಲು ಹೋಗಿ ಬಿದ್ದಿದ್ದೆ. ಬಳಿಕ, ಒಂದು ಕಡ್ಡಿಗೆ ಬಟ್ಟೆ ಸಿಕ್ಕಿಸಿ ಗುಂಡಿಗೆ ನೆಟ್ಟಿದ್ದೇನೆ ಎಂದು ವೃದ್ಧರಾದ ಚೆಟ್ಟಿಯಾರ್ ದೂರುತ್ತಾರೆ. ಮಳೆಗಾಲ ಈಗಾಗಲೇ ಆರಂಭವಾಗಿದ್ದು, ಇನ್ನೂ ಹೆಚ್ಚಿನ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಮ್ಯಾನ್ಹೋಲ್ಗಳಿಗೆ ಕಾಯಕಲ್ಪ ನೀಡಬೇಕು. ಕಿತ್ತುಹೋದ ರಸ್ತೆಗಳಿಗೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ.