ಚಾಮರಾಜನಗರ: ಚಾಮರಾಜನಗರ ಹಾಗೂ ರಾಮನಗರದ ನಡುವೆ ಇರುವ ಮೇಕೆದಾಟು ಪ್ರದೇಶಕ್ಕೆ ಚಾಮರಾಜನಗರದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ ನೀಡಿ, ಅಲ್ಲಿನ ಪ್ರದೇಶ ವೀಕ್ಷಿಸಿದ್ದಾರೆ. ಈ ವೇಳೆ ಕಾವೇರಿ ವನ್ಯಜೀವಿಧಾಮದ ಎಸಿಎಫ್ ಅಂಕರಾಜು ಅವರಿಂದ ಸ್ಥಳದ ಬಗ್ಗೆ ಮಾಹಿತಿ ಪಡೆದರು.
ಚಾಮರಾಜನಗರ ಹಾಗೂ ರಾಮನಗರ ಗಡಿಯೇ ಕಾವೇರಿ ನದಿ ಆಗಿದ್ದು, ಮೇಕೆದಾಟಿಗೆ ಭೇಟಿ ನೀಡಿ ಜಿಲ್ಲೆಯ ಗಡಿ, ಸಂಗಮ, ಪಾಲಾರ್, ಹೊಗೇನಕಲ್ ಜಲಪಾತದ ಸ್ಥಳಗಳನ್ನು ಭೂಪಟದಲ್ಲಿ ನೋಡಿ ಎಸಿಎಫ್ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಮೇಕೆದಾಟು ಆಣೆಕಟ್ಟು ಯೋಜನೆ ಸಂಬಂಧವೇನು ಡಿಸಿ ಭೇಟಿ ನೀಡಿಲ್ಲ. ಹನೂರು ತಾಲೂಕಿನ ಗಾಣಿಗಮಂಗಲಕ್ಕೆ ತೆರಳಿದ ಬಳಿಕ ಜಿಲ್ಲೆಯ ಗಡಿಭಾಗವನ್ನು ನೋಡಲು ಬಂದಿದ್ದರು ಎಂದು ಎಸಿಎಫ್ ಅಂಕರಾಜು ತಿಳಿಸಿದ್ದಾರೆ.