ಚಾಮರಾಜನಗರ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಗ್ರಾಮೀಣ ಭಾಗದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಮನವಿ ಮಾಡಿದರು.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ 25 ದಿನದ ಅವಧಿಯಲ್ಲಿ 2255 ಪ್ರಕರಣ ದಾಖಲಾಗಿದ್ದು, ಕಳೆದ ವರ್ಷ ಇಷ್ಟು ದೊಡ್ಡ ಪ್ರಮಾಣದಲ್ಲಿ ವೇಗವಾಗಿ ಪ್ರಕರಣಗಳು ವರದಿಯಾಗಿರಲಿಲ್ಲ. ಕಳೆದ 5 ದಿನಗಳಿಂದ ಪ್ರತಿನಿತ್ಯ 200ಕ್ಕೂ ಹೆಚ್ಚು ಪ್ರಕರಣ ದಾಖಲಾಗುತ್ತಿದೆ. ದಾಖಲಾಗಿರುವ 2255 ಪ್ರಕರಣಗಳಲ್ಲಿ 1697 ಪ್ರಕರಣ ಗ್ರಾಮೀಣ ಭಾಗದಲ್ಲಿ ಕಂಡುಬಂದಿದೆ. ಶಿವರಾತ್ರಿ ನಂತರ ಗ್ರಾಮೀಣ ಭಾಗದಲ್ಲಿ ಜರಗಿದ ಹಬ್ಬ ಹರಿದಿನಗಳು, ಜಾತ್ರೆಗಳಿಂದ ಕೊರೊನಾ ಹೆಚ್ಚಾಗಲು ಕಾರಣವಿರಬಹುದು. ಆದ್ದರಿಂದ ಗ್ರಾಮೀಣ ಭಾಗದ ಜನರು ಎಚ್ಚರಿಕೆಯಿಂದಿದ್ದು, ಕೊರೊನಾದಿಂದ ದೂರ ಇರುವಂತೆ ಹೇಳಿದರು.
ಅಲ್ಲದೇ, 21ರಿಂದ 40 ವರ್ಷ ವಯಸ್ಸಿನವರಲ್ಲಿ 1036 ಪ್ರಕರಣ ಕಂಡುಬಂದಿದ್ದು, 60 ವರ್ಷ ಮೇಲ್ಪಟ್ಟವರಲ್ಲಿ ಕಡಿಮೆ ಕಂಡುಬಂದಿದೆ. ಜನವರಿ ತಿಂಗಳಿಂದ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕೊಡಲಾಗುತ್ತಿದ್ದು, ಈಗಾಗಲೇ 2 ಡೋಸ್ ಮುಗಿದಿದೆ. ಇದೇ ಕಾರಣದಿಂದ ಈ ವಯಸ್ಸಿನವರಲ್ಲಿ ಕೊರೊನಾ ಸೋಂಕಿನ ಪ್ರಕರಣ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತಿದೆ. 45 ವರ್ಷ ಮೇಲ್ಪಟ್ಟವರಿಗೆ ಒಂದು ತಿಂಗಳಿಂದ ಲಸಿಕೆ ಕೊಡಲಾಗುತ್ತಿದೆ. ಈ ತಿಂಗಳಲ್ಲಿ 13 ಜನರು ಮೃತಪಟ್ಟಿದ್ದು, ಇದರಲ್ಲಿ 9 ಜನರು ಲಸಿಕೆ ಪಡೆದಿರಲಿಲ್ಲ ಎಂಬುದು ತಿಳಿದು ಬಂದಿದೆ. 45 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು ಎಂದು ಅವರು ಹೇಳಿದರು.