ಚಾಮರಾಜನಗರ : ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 24 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದು, ಬಹುಪಾಲು ಮಂದಿ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದವರು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯರಾತ್ರಿ 11 ಗಂಟೆಯ ಹೊತ್ತಿಗೆ ಆಮ್ಲಜನಕದ ಕೊರತೆ ಉಂಟಾಗಿತ್ತು. ಆದರೆ, 24 ಮಂದಿಯೂ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿಲ್ಲ. ಬೆಳಗ್ಗೆಯಿಂದ ಮಧ್ಯರಾತ್ರಿಯವರೆಗೆ 14 ಮಂದಿ ಮೃತಪಟ್ಟಿದ್ದಾರೆ.
ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಮಧ್ಯರಾತ್ರಿ 12 ರಿಂದ 2 ರವರೆಗೆ ಮೂವರು ಮೃತಪಟ್ಟಿದ್ದು, 2 ರಿಂದ ಮುಂಜಾನೆ 7 ರವರೆಗೆ 7 ಮಂದಿ ಕೊನೆಯುಸಿರೆಳೆದಿದ್ದಾರೆ. ಈಗಾಗಲೇ, ವೈದ್ಯರು ಡೆತ್ ಆಡಿಟ್ ಮಾಡುತ್ತಿದ್ದು, ಮಧ್ಯಾಹ್ನದ ವೇಳೆಗೆ ರೋಗಿಗಳ ಸಾವಿನ ನಿಜ ಕಾರಣ ತಿಳಿಯಲಿದೆ ಎಂದು ತಿಳಿಸಿದರು.
ಓದಿ : ಚಾಮರಾಜನಗರದಲ್ಲಿ ಭೀಕರ ದುರಂತ: 24 ಸಾವು, ಆಕ್ಸಿಜನ್ ಸಿಗದೆ 12 ಮಂದಿ ಕೊನೆಯುಸಿರು
ಮೈಸೂರಿನ ಆಕ್ಸಿಜನ್ ಪೂರೈಕೆದಾರರ ಜೊತೆಗೆ ಮಾತನಾಡಿ ಮಧ್ಯರಾತ್ರಿಯೇ ಎರಡು ಬಾರಿ ಆಮ್ಲಜನಕ ತರಿಸಿಕೊಂಡಿದ್ದೇವೆ. ಇಂದು ಕೂಡ ಆಕ್ಸಿಜನ್ ಬರಲಿದೆ. ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದ್ದು, ಸಮರ್ಪಕ ಆಮ್ಲಜನಕ ಪೂರೈಕೆಯಾದರೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ.