ಚಾಮರಾಜನಗರ: ಮೈಸೂರು ದಸರಾ ಮಹೋತ್ಸವದ ಭಾಗವಾಗಿ ಚಾಮರಾಜನಗರದಲ್ಲೂ ಅಕ್ಟೋಬರ್ 1ರಿಂದ 4ರವರೆಗೆ ದಸರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಚಾಮರಾಜನಗರ ದಸರಾಕ್ಕೆ ವಿದ್ಯುತ್ ದೀಪಗಳಿಂದ ಅಲಂಕಾರ ಅಕ್ಟೋಬರ್ 1ರ ಬೆಳಗ್ಗೆ 8.30ಕ್ಕೆ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯದೊಂದಿಗೆ ಚಾಮರಾಜನಗರ ದಸರಾ ಮಹೋತ್ಸವ ಆರಂಭವಾಗಲಿದೆ. ಅಂದು ಸಂಜೆ 5.30ಕ್ಕೆ ದೇಗುಲ ಆವರಣದಲ್ಲಿ ನಿರ್ಮಿಸಲಾಗಿರುವ ವೇದಿಕೆಯಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್‍ಕುಮಾರ್ ಚಾಲನೆ ನೀಡಲಿದ್ದಾರೆ.
1ರ ಸಂಜೆ 7 ಗಂಟೆಗೆ ಚಂದನ್ ಶೆಟ್ಟಿ ಮತ್ತು ತಂಡದವರಿಂದ ಸಂಗೀತ ರಸಸಂಜೆ, 2 ರ ಸಂಜೆ 6.30 ಕ್ಕೆ ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ನಗೆಹಬ್ಬ, 3 ರ ಸಂಜೆ 6.30ಕ್ಕೆ ಡಾ. ವಿದ್ಯಾಭೂಷಣ್ ಮತ್ತು ತಂಡದವರಿಂದ ಭಕ್ತಿಗಾಯನ, ರಾತ್ರಿ 8.30 ಕ್ಕೆ ರಷ್ಯನ್ ನೃತ್ಯ ವೈಭವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಹಾಗೂ 4ರಂದು ಸಂಜೆ 7.30ಕ್ಕೆ ವಿಜಯ್ಪ್ರಕಾಶ್ ಮತ್ತು ತಂಡದವರಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ಏರ್ಪಡಿಸಿದ್ದು, ಚಾಮರಾಜನಗರ ದಸರಾ ಅದ್ಧೂರಿಯಾಗಿ ಆಯೋಜನೆ ಮಾಡಲಾಗಿದೆ.
ಮೊದಲ ಬಾರಿ ಆಹಾರ ಮೇಳ:
ಈ ಬಾರಿ ಆಹಾರಪ್ರಿಯರಿಗೆ ಜಿಲ್ಲಾ ದಸರಾ ಸಂತಸ ನೀಡಲು ಸಿದ್ಧವಾಗಿದ್ದು, ಮೊದಲ ಬಾರಿಗೆ ಆಹಾರ ಮೇಳ ಆಯೋಜಿಸಿದೆ. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವತಿಯಿಂದ ದಸರಾ ಪ್ರಯುಕ್ತ ನಗರದ ಪೇಟೆ ಪ್ರೈಮರಿ ಶಾಲೆಯ ಆವರಣದಲ್ಲಿ ಆಹಾರಮೇಳವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ಖಾದ್ಯಗಳಲ್ಲದೇ ಅಂತರ ರಾಜ್ಯ ಮತ್ತು ವಿದೇಶಿ ತಿನಿಸುಗಳೂ ಇರಲಿವೆ. ಜೊತೆಗೆ ರೈತ ದಸರಾ, ಮಹಿಳಾ ದಸರಾ ಕೂಡ ಆಯೋಜಿಸಿದ್ದು, ಈಗಾಗಲೇ ನಗರದ ಪ್ರಮುಖ ರಸ್ತೆ, ವೃತ್ತಗಳು ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದೆ.