ಚಾಮರಾಜನಗರ: ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಆತ್ಮಹತ್ಯೆಗೆ ಯತ್ನ ನಡೆಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸ್ ಕಾನ್ಸ್‌ಟೇಬಲ್ ಹೆಚ್.ಆರ್ ಮಹೇಶ್ ಆತ್ಮಹತ್ಯೆಗೆ ಯತ್ನಿಸಿದವರು. ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ್ ಅವರನ್ನು ಹನೂರು ಠಾಣೆಗೆ ವರ್ಗಾವಣೆ ಮಾಡಿ ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿಗಳು ವರ್ಗಾವಣೆ ಮಾಡಿದ್ದರು. ಜತೆಗೆ, ಇತರ ಠಾಣೆಗಳ 7 ಮಂದಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು.
ವರ್ಗಾವಣೆಯಿಂದ ಮನನೊಂದು ಈ ಯತ್ನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಪಕ್ಕೆಲುಬು, ಕೈ- ಕಾಲಿಗೆ ಸುಟ್ಟ ಗಾಯಗಳಾಗಿದ್ದು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಎಸ್ಪಿ ಶಿವಕುಮಾರ್ ಪ್ರತಿಕ್ರಿಯಿಸಿ, 'ವಿಚಾರ ಗಮನಕ್ಕೆ ಬಂದಿದ್ದು, ಯಾವ ಕಾರಣಕ್ಕೆ ಆತ್ಮಹತ್ಯೆ ಯತ್ನಿಸಿದರು ಎಂದು ತಿಳಿದು ಬಂದಿಲ್ಲ. ಕೆಲವರಿಗೆ ಎಚ್ಚರಿಕೆ ಕೊಡುವ ಉದ್ದೇಶದಿಂದ ವರ್ಗಾವಣೆ ಮಾಡಲಾಗಿತ್ತು. ಪರಿಶೀಲನೆ ನಡೆಸಿ ಬಳಿಕ ಹೆಚ್ಚಿನ ವಿವರ ಹಂಚಿಕೊಳ್ಳುತ್ತೇನೆ' ಎಂದು ತಿಳಿಸಿದ್ದಾರೆ.
ಮಹಿಳೆ ಸರ ಕಸಿದು ಪರಾರಿ: ಮತ್ತೊಂದೆಡೆ ಮಹಿಳೆಯೊಬ್ಬರ ಸರ ಕಸಿದು ಪರಾರಿಯಾಗಿರುವ ಘಟನೆ ಕೊಳ್ಳೇಗಾಲದ ಸಾಯಿಮಂದಿರ ರಸ್ತೆಯಲ್ಲಿ ನಡೆದಿದೆ. ನಗರದ ಸಾಯಿಮಂದಿರ ರಸ್ತೆಯ ನಿವಾಸಿ ನಾಗರತ್ನ ಸರ ಕಳೆದುಕೊಂಡವರು. ದಿನಸಿ ಅಂಗಡಿಗೆ ತೆರಳಿ ಪದಾರ್ಥಗಳನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಬೈಕ್ನಲ್ಲಿ ಬಂದ ಇಬ್ಬರು ಖದೀಮರು ಸರ ಕಸಿದು ಪರಾರಿಯಾಗಿದ್ದಾರೆ. ಸರದ ತೂಕ 57 ಗ್ರಾಂ ಎಂದು ತಿಳಿದು ಬಂದಿದೆ. ಕೊಳ್ಳೇಗಾಲ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.