ಚಾಮರಾಜನಗರ:ಸಿಡಿಲು ಬಡಿದು ದೇವಾಲಯದ ಗರ್ಭಗುಡಿಯ ಗೋಪುರಕ್ಕೆ ಹಾನಿಯಾಗಿರುವ ಘಟನೆ ಹನೂರು ತಾಲೂಕಿನ ಅಂಬಿಕಾಪುರ ಗ್ರಾಮದಲ್ಲಿ ನಡೆದಿದೆ. ಅಂಬಿಕಾಪುರ ಗ್ರಾಮದ ಸುತ್ತಮುತ್ತ ಗುಡುಗು ಸಹಿತ ಜೋರು ಮಳೆಯಾಗಿದೆ. ಈ ವೇಳೆ ಗ್ರಾಮದ ಹೊರವಲಯದಲ್ಲಿನ ಅಗ್ನಿ ಮಾರಿಯಮ್ಮನ್ ದೇವಸ್ಥಾನದ ಗರ್ಭಗುಡಿಯ ಗೋಪುರಕ್ಕೆ ಸಿಡಿಲು ಬಡಿದಿದೆ.
ಸಿಡಿಲು ಬಡಿದ ಪರಿಣಾಮ ಕಳಸ ಸ್ಥಾಪನೆ ಅಡಿಪಾಯಕ್ಕೆ ತೀವ್ರವಾಗಿ ಹಾನಿಯಾಗಿದೆ. ಗೋಪುರ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಗೋಪುರವನ್ನು ಮರು ನಿರ್ಮಿಸಿ ಸಂಪ್ರೋಕ್ಷಣೆ ಕಾರ್ಯಕ್ರಮವನ್ನು ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಜೋರು ಮಳೆಗೆ 20 ವರ್ಷದ ಬಳಿಕ ಕೋಡಿ ಬಿದ್ದ ಕೆರೆ ಮತ್ತೊಂದೆಡೆ ಚಾಮರಾಜನಗರ ತಾಲೂಕಿನ ಬಸಪ್ಪನ ಪಾಳ್ಯ ಗ್ರಾಮದಲ್ಲಿ ಸತತ ಮಳೆಗೆ ಮನೆಯ ಗೋಡೆ ಕುಸಿದಿದ್ದು, ಶೇಖರಿಸಿಟ್ಟಿದ್ದ ದವಸಧಾನ್ಯಗಳು ಮಣ್ಣು ಪಾಲಾಗಿವೆ. ಕಳೆದ ವಾರ ಸುರಿದಿದ್ದ ಮಳೆಗೆ ಕಾಲುವೆ ಕಿತ್ತುಹೋಗಿ, 25 ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿಯಾಗಿತ್ತು. ಅಧಿಕಾರಿಗಳು ಯಾವುದೇ ಕ್ರಮ ವಹಿಸಿಲ್ಲ ಎಂದು ಗ್ರಾಮಪಂಚಾಯಿತಿ ಸದಸ್ಯ ರೇವಣ್ಣ ದೂರಿದ್ದಾರೆ.
20 ವರ್ಷದ ಬಳಿಕ ಕೋಡಿ ಬಿದ್ದ ಕೆರೆ:ಗುಂಡ್ಲುಪೇಟೆ ತಾಲೂಕಿನ ಶಿವಪುರ ಸಮೀಪದ ಕಲ್ಕಟ್ಟೆ ಕೆರೆ ಬರೋಬ್ಬರಿ 20 ವರ್ಷಗಳ ಬಳಿಕ ಕೋಡಿ ಬಿದ್ದಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಈ ಕೆರೆಯು ಸುಮಾರು 740 ಎಕರೆ ಪ್ರದೇಶದಲ್ಲಿದ್ದು, ಕೆರೆಗೆ ನೀರು ತುಂಬಿಸುವ ಯೋಜನೆಯಲ್ಲಿ ನೀರು ಬಿಡಲಾಗಿತ್ತು. ಜೊತೆಗೆ ನಿರಂತರ ಮಳೆಯೂ ಆಗಿದ್ದರಿಂದ ಕೋಡಿ ಬಿದ್ದಿದೆ. ಇದರಿಂದ ಸುತ್ತಮುತ್ತಲಿನ ಕೋಡಹಳ್ಳಿ, ಅಣ್ಣೂರುಕೇರಿ, ಪುತ್ತನಪುರ, ಬಸವಾಪುರ, ವಡ್ಡನಹೊಸಹಳ್ಳಿ ಸೇರಿದಂತೆ ಹಲವು ಗ್ರಾಮಗಳ ರೈತರಿಗೆ ಉಪಯೋಗವಾಗಲಿದೆ.
ಇದನ್ನೂ ಓದಿ:ರಾಜ್ಯದ ಏಳು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ.. ರೆಡ್ ಅಲರ್ಟ್ ಘೋಷಣೆ
ಹಿರಿಕೆರೆಯೂ ಭರ್ತಿ:ಮುಂಗಾರು ಮಳೆ ಪ್ರಾರಂಭವಾಗುವ ಮುನ್ನವೇ ಚಾಮರಾಜನಗರ ತಾಲೂಕಿನ ಹೊಂಗನೂರು ಸಮೀಪದ ಹಿರಿಕೆರೆಯೂ ಭರ್ತಿಯಾಗಿದೆ. ನೂರಾರು ಎಕರೆಯಲ್ಲಿ ಹರಡಿಕೊಂಡಿರುವ ಈ ಕೆರೆಯೂ ಹೆಸರೇ ಸೂಚಿಸುವಂತೆ ದೊಡ್ಡ ಕೆರೆಯಾಗಿದ್ದು, ಭರ್ತಿಯಾಗಿರುವುದರಿಂದ ರೈತರಿಗೆ ನೆರವಾಗಲಿದೆ.