ಚಾಮರಾಜನಗರ:ಸಂವಿಧಾನ ದಿನ ನ.26ರಂದು ಮಂತ್ರ ಮಾಂಗಲ್ಯದ ಮೂಲಕ ಚಾಮರಾಜನಗರ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದಾ ನವ ಜೀವನಕ್ಕೆ ಕಾಲಿಡಲಿದ್ದಾರೆ. ಹೌದು, ಮದುವೆ ಎಂದರೆ ಅದ್ಧೂರಿತನ ಪ್ರದರ್ಶನ, ವಿಜೃಂಭಣೆಯೇ ಆಗಿರುವ ಈ ಕಾಲದಲ್ಲಿ ಸರಳವಾಗಿ, ವೈಚಾರಿಕವಾಗಿ ಉನ್ನತ ಅಧಿಕಾರಿಯೊಬ್ಬರು ನವ ಜೀವನಕ್ಕೆ ಕಾಲಿಡುವ ಮೂಲಕ ಇತರರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.
ಚಾಮರಾಜನಗರದ ಹೆಚ್ಚುವರಿ ಜಿಲ್ಲಾಧಿಕಾರಿ ಆಗಿರುವ ಗೀತಾ ಹುಡೇದಾ ಅವರು ಹರೀಶ್ ಕುಮಾರ್ ಜೊತೆ ಮೈಸೂರಿನಲ್ಲಿ ಮಂತ್ರ ಮಾಂಗಲ್ಯದ ಮೂಲಕ ನವಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರ ವಿವಾಹ ಆಮಂತ್ರಣದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಕುವೆಂಪು ಚಿತ್ರಗಳನ್ನು ಹಾಕಿಸಿ ವೈಚಾರಿಕತೆ ಮೆರೆದಿದ್ದಾರೆ.
ಲೇಖಕ ಕುಂವೀ ಭಾಗಿ:ಕನ್ನಡದ ಖ್ಯಾತ ಸಾಹಿತಿ, ಲೇಖಕ ಕುಂ.ವೀರಭದ್ರಪ್ಪ ಇವರ ವಿವಾಹದಲ್ಲಿ ಮಂತ್ರ ಮಾಂಗಲ್ಯವನ್ನು ಬೋಧನೆ ಮಾಡಲಿದ್ದು, ಗೀತಾ ಹಾಗೂ ಹರೀಶ್ ಅವರು ಸರಳವಾಗಿ ದಾಂಪತ್ಯಕ್ಕೆ ಕಾಲಿಡಲಿದ್ದಾರೆ. ಈ ಕುರಿತು, ಎಡಿಸಿ ಗೀತಾ ಹುಡೇದಾ ಪ್ರತಿಕ್ರಿಯೆ ಕೊಟ್ಟಿದ್ದು, ಅನಗತ್ಯದ ವೆಚ್ಚ ಬೇಡ, ಸರಳವಾಗಿ, ವೈಚಾರಿಕವಾಗಿ ಸಂವಿಧಾನದ ದಿನದಂದು ಮಂತ್ರಮಾಂಗಲ್ಯ ಮೂಲಕ ವಿವಾಹವಾಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಏನಿದು ಮಂತ್ರ ಮಾಂಗಲ್ಯ?:ಪುರೋಹಿತರಿಲ್ಲದೇ, ದುಂದು ವೆಚ್ಚ ಮಾಡದೇ, ವೈಚಾರಿಕವಾಗಿ ಸರಳವಾಗಿ ದಾಂಪತ್ಯಕ್ಕೆ ಕಾಲಿಡುವ ವಿವಾಹ ಪದ್ಧತಿಯನ್ನು ರಾಷ್ಟ್ರಕವಿ ಕುವೆಂಪು ಪ್ರಾರಂಭಿಸಿದರು.
ಮಂತ್ರ ಮಾಂಗಲ್ಯ ವಿವಾಹ ಸಂಹಿತೆ:ಕುವೆಂಪು ಅವರು ಮೊದಲು ರಚಿಸಿದ ಮಂತ್ರ ಮಾಂಗಲ್ಯ ಎಂಬ ಚಿಕ್ಕ ಪುಸ್ತಕದಲ್ಲಿ ಅವರು ದಿನವೂ ದೇವರ ಮನೆಯಲ್ಲಿ ಧ್ಯಾನಮಾಡುತ್ತಾ ಹೇಳುತ್ತಿದ್ದ ದೇವಿಸ್ತೋತ್ರಗಳನ್ನು ಮಾತ್ರ ಸೇರಿಸಿದ್ದರು. ನಂತರ ಈ ಮಂತ್ರಗಳನ್ನು ಸೇರಿಸಿರುವುದರಿಂದ ಸಾಂಪ್ರದಾಯಿಕ ಮದುವೆಯಂತಾಗಬಹುದು ಮತ್ತು ಸಾಮಾನ್ಯ ಜನರಿಗೆ ಇದು ಅರ್ಥವಾಗುವುದಿಲ್ಲ ಎಂಬುದನ್ನು ಮನಗಂಡ ತೇಜಸ್ವಿಯವರು ಇದನ್ನು ಕುವೆಂಪುರವರ ಗಮನಕ್ಕೆ ತರುತ್ತಾರೆ. ಮದುವೆಗೆ ಒಂದು ಸಾಂಸ್ಕೃತಿಕ ಅರ್ಥ ಬರಲೆಂದು ಸೇರಿಸಿದ್ದ ಶ್ಲೋಕಗಳಲ್ಲಿ ಇಡೀ ಮನುಕುಲದ ಶ್ರೇಯಸ್ಸನ್ನು ಕೋರುವ ಮಹೋನ್ನತ ಆಶಯಗಳಿರುವುದರಿಂದ ಶ್ಲೋಕಗಳ ಜೊತೆಗೆ ಅದರ ಸಾರಾಂಶವನ್ನು ಗದ್ಯ ರೂಪಕ್ಕೆ ಇಳಿಸಲು ತೇಜಸ್ವಿಯವರಿಗೆ ತಿಳಿಸುತ್ತಾರೆ.
ತೇಜಸ್ವಿಯವರು ರೈತಸಂಘದ ಮುಖಂಡ ಹಾಗೂ ಸ್ನೇಹಿತರಾದ ಎಂ.ಡಿ. ನಂಜುಂಡಸ್ವಾಮಿ ಅವರ ಜೊತೆ ಸೇರಿ ಗದ್ಯದ ರೂಪದಲ್ಲಿ ವಿವಾಹ ಸಂಹಿತೆಯೊಂದನ್ನು ಬರೆದು ಕುವೆಂಪು ಅವರ ಒಪ್ಪಿಗೆಯ ಮೇರೆಗೆ ಮಂತ್ರ ಮಾಂಗಲ್ಯದ ಪುಸ್ತಕಕ್ಕೆ ಸೇರಿಸುತ್ತಾರೆ. ಕನ್ನಡ ಗದ್ಯದಲ್ಲಿದ್ದ ಈ ಹೊಸ ವಿವಾಹ ಸಂಹಿತೆಯನ್ನು ಓದಿ ಉಪದೇಶಿಸುವುದು ಸಂಸ್ಕೃತ ಶ್ಲೋಕಗಳನ್ನು ಹೇಳುವುದಕ್ಕಿಂತ ಸುಲಭವಾದ್ದರಿಂದ ಆ ಮೇಲಿನ ಮಂತ್ರಮಾಂಗಲ್ಯ ಮದುವೆಗಳೆಲ್ಲಾ ಗದ್ಯರೂಪದ ವಿವಾಹ ಸಂಹಿತೆಯನ್ನು ಹೆಚ್ಚಾಗಿ ಉಪಯೋಗಿಸಲು ಆರಂಭಿಸಿದವು.
ಮಂತ್ರಮಾಂಗಲ್ಯದ ಸಂಹಿತೆ ಹೀಗಿದೆ:
1. ಈ ದಿನ ಇಲ್ಲಿ ಈ ರೀತಿ ಮದುವೆಯಾಗುವುದರ ಮೂಲಕ ನೀವು ನಿಮ್ಮ ಎಲ್ಲಾ ಮಾನಸಿಕ ಮತ್ತು ಆಧ್ಯಾತ್ಮಿಕ ಸಂಕೋಲೆ ಮತ್ತು ದಾಸ್ಯಗಳಿಂದ ವಿಮುಕ್ತರಾಗಿ ಸ್ವತಂತ್ರರಾಗುತ್ತಿದ್ದೀರಿ.
2. ನೀವು ಇನ್ನು ಈ ಭೂಮಂಡಲದ ಯಾವುದೇ ಜಾತಿ ಮತ್ತು ಜನಾಂಗಗಳಿಗಿಂತ ಮೇಲಾದವರಲ್ಲ.
3. ಹಾಗೆಯೇ ಯಾವುದೇ ಜಾತಿ ಮತ್ತು ಜನಾಂಗಗಳಿಗಿಂತ ಕೀಳಾದವರೂ ಅಲ್ಲ.
4. ನಿಮ್ಮನ್ನು ಇಂದು ಮನುಷ್ಯ ಸಮಾಜದ ಎಲ್ಲ ಕೃತಕ ಜಾತಿಗಳಿಂದ ಮುಕ್ತರನ್ನಾಗಿ ಮಾಡಿದ್ದೇವೆ.
5. ನಿಮ್ಮನ್ನು ಇಂದು ಎಲ್ಲಾ ಸಂಕಚಿತ ಮತಧರ್ಮಗಳಿಂದ ಮುಕ್ತರನ್ನಾಗಿ ಮಾಡಿದ್ದೇವೆ.
6. ನಿಮ್ಮನ್ನು ಎಲ್ಲ ಆಚಾರ ಸಂಪ್ರದಾಯಗಳಿಂದ ಮುಕ್ತರನ್ನಾಗಿ ಮಾಡಿದ್ದೇವೆ.
7. ನಿಮ್ಮನ್ನು ಎಲ್ಲಾ ಅಸತ್ಯ ಮತ್ತು ಮೂಢನಂಬಿಕೆಗಳಿಂದ ಮುಕ್ತರನ್ನಾಗಿ ಮಾಡಿದ್ದೇವೆ