ಚಾಮರಾಜನಗರ: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ಬೆಂಗಳೂರು ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ತಮಿಳುನಾಡು ಗಡಿಯನ್ನು ಬಂದ್ ಮಾಡಿ ಊಟಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿತ್ತು.
ಊಟಿ ಜಿಲ್ಲಾಡಳಿತವನ್ನು ಚಾಮರಾಜನಗರ ಅಧಿಕಾರಿಗಳು ಸಂಪರ್ಕಿಸಿ ಪರಿಸ್ಥಿತಿ ಶಾಂತಿಯುತವಾಗಿರುವುದನ್ನು ತಿಳಿಸಿದರು. ಬೆಳಗ್ಗೆ 8.30 ರ ಬಳಿಕ ಕರ್ನಾಟಕ ವಾಹನಗಳು ಸೇರಿದಂತೆ ಎಲ್ಲಾ ರಾಜ್ಯದ ನೋಂದಣಿ ವಾಹನಗಳ ಓಡಾಟಕ್ಕೆ ಊಟಿ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ. ಆದರೆ, ತಮಿಳುನಾಡು ವಾಹನಗಳನ್ನು ಕರ್ನಾಟಕ ಪ್ರವೇಶಿಸಿಲು ನಿರ್ಬಂಧ ಮುಂದುವರೆಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಕೆಕ್ಕನಹಳ್ಳ ಚೆಕ್ ಪೋಸ್ಟ್ನಲ್ಲಿ ಎಲ್ಲಾ ರೀತಿಯ ವಾಹನಗಳನ್ನು ನಿರ್ಬಂಧಿಸಿ ಬಂದ್ ಮುಗಿಯುವ ತನಕ ವಾಹನಗಳು ಸಂಚರಿಸುವುದು ಬೇಡ ಎಂದು ಸೂಚಿಸಿದ್ದರು. ಆದರೆ, ಆದೇಶವನ್ನು ಈಗ ಮಾರ್ಪಟು ಮಾಡಿ ಕೇವಲ ತಮಿಳುನಾಡು ನೋಂದಣಿ ವಾಹನಗಳು ಕರ್ನಾಟಕಕ್ಕೆ ತೆರಳುವುದು ಬೇಡ ಎಂದು ಊಟಿ ಜಿಲ್ಲಾಡಳಿತ ನಿರ್ಧರಿಸಿದೆ.
ಏಕಾಏಕಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದ್ದರಿಂದ ಎರಡು ರಾಜ್ಯದ ವಾಹನ ಸವಾರರು 2 ತಾಸು ಪರದಾಡುವಂತಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ಉದ್ದೇಶದಿಂದ ವಾಹನ ಸಂಚಾರ ನಿರ್ಬಂಧ ಹೇರಲಾಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದರು.
ಇದನ್ನೂ ಓದಿ: ಬೆಂಗಳೂರು ಬಂದ್: ನಗರದಲ್ಲಿ ಬಿಎಂಟಿಸಿ ಬಸ್ ಸಂಚಾರ
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಇಂದು ರೈತ ಪರ ಹಾಗೂ ವಿವಿಧ ಸಂಘಟನೆಗಳು ಬೆಂಗಳೂರು ಬಂದ್ಗೆ ಕರೆ ನೀಡಿವೆ. ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಈಗಾಗಲೇ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಜನರ ಗುಂಪು ಸೇರುವಂತಿಲ್ಲ. ಈ ನಿಟ್ಟಿನಲ್ಲಿ ಪ್ರತಿಭಟನಾಕಾರರನ್ನ ವಶಕ್ಕೆ ಪಡೆಯುವ ಸಾಧ್ಯತೆಯಿದ್ದು, ಕರೆದೊಯ್ಯಲು ಹತ್ತು ಬಿಎಂಟಿಸಿ ಬಸ್‌ಗಳನ್ನ ಈಗಾಗಲೇ ಕಾಯ್ದಿರಿಸಲಾಗಿದೆ. ಟೌನ್ ಹಾಲ್ ಬಳಿ ಮುನ್ನೂರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿದ್ದಾರೆ. ಜೊತೆಗೆ ಬೆಂಗಳೂರಿನಾದ್ಯಂತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಬೆಂಗಳೂರು ಬಂದ್ಗೆ ಎಎಪಿ, ಬಿಜೆಪಿ ಮತ್ತು ಜೆಡಿಸ್ ಕೂಡ ಬೆಂಬಲ ನೀಡಿವೆ. ಬಂದ್ ಹಿನ್ನೆಲೆಯಲ್ಲಿ ಭಾಗಶಃ ಖಾಸಗಿ ಸಂಚಾರ ಮತ್ತು ಮಾರುಕಟ್ಟೆ ಬಂದ್ ಆಗಿದ್ದು, ಸಾರ್ವಜನಿಕರು ಕೆಲಕಾಲ ತೊಂದರೆ ಅನುಭವಿಸಿದರು. ಆದ್ರೆ ಬಿಎಂಟಿಸಿ, ಮೆಟ್ರೋ ಸಾರಿಗೆ ಸೇವೆ ಎಂದಿನಂತೆ ಲಭ್ಯವಾಗಿದೆ.
ಇದನ್ನೂ ಓದಿ: ಇಂದು ಬೆಂಗಳೂರು ಬಂದ್: ಶಾಲಾ-ಕಾಲೇಜಿಗೆ ರಜೆ, ಆಟೋ, ಟ್ಯಾಕ್ಸಿ ಸಿಗಲ್ಲ; ಏನಿರುತ್ತೆ, ಏನ್ ಇರಲ್ಲ?
ರಾಮನಗರ ಬಂದ್:ರಾಮನಗರದಲ್ಲಿ ಕಾವೇರಿಗಾಗಿ ಪ್ರತಿಭಟನೆ ಕಾವೇರಿದೆ. ರೈತ ಸಂಘಟನೆಗಳು ಇಂದು ರಾಮನಗರ ಬಂದ್ ಮಾಡಿ ಆಕ್ರೋಶ ಹೊರಹಾಕಿದರು. ಇದೇ ವೇಳೆ ತಮಿಳುನಾಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಜೊತೆಗೆ ತಮಿಳುನಾಡು ಸಿಎಂ ಸ್ಟಾಲಿನ್ಗೆ ಅಣಕು ಶ್ರದ್ಧಾಂಜಲಿ ಮತ್ತು ತಿಥಿ ಮಾಡುವ ಆಕ್ರೋಶ ವ್ಯಕ್ತಪಡಿಸಿದರು.