ಚಾಮರಾಜನಗರ: ಜನಾಶೀರ್ವಾದ ಪಡೆದ ಬಳಿಕ ಭಗವಂತನ ಆಶೀರ್ವಾದ ಪಡೆಯಲು ನೂತನ ಶಾಸಕರು ಕಾಲ್ನಡಿಗೆಯಲ್ಲಿ ದೇವರ ಮೊರೆ ಹೋಗಿದ್ದಾರೆ. ಕಾಂಗ್ರೆಸ್ ಶಾಸಕರ ಪುತ್ರ ದೇವರಿಗೆ ಮುಡಿ ಕೊಟ್ಟಿದ್ದಾರೆ. ಮತ್ತೊಂದೆಡೆ ಹನೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ನೂತನ ಶಾಸಕ, ಎಂ. ಆರ್. ಮಂಜುನಾಥ್ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ದೇವರ ದರ್ಶನ ಮಾಡುವ ಮೂಲಕ ಹರಕೆ ತೀರಿಸಿದ್ದಾರೆ.
ರಾಜ್ಯದ ಪ್ರಸಿದ್ಧ ತೀರ್ಥಕ್ಷೇತ್ರವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ತಮ್ಮ ಬೆಂಬಲಿಗರೊಂದಿಗೆ ಕಾಲ್ನಡಿಗೆಯಲ್ಲಿ ತೆರಳಿ ನಿನ್ನೆ ರಾತ್ರಿ ಹಾಗೂ ಇಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಾಸಕನಾಗಿ ಆಯ್ಕೆಯಾದರೇ ತಾಳಬೆಟ್ಟದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ದರ್ಶನ ಪಡೆಯುವುದಾಗಿ ಮಂಜುನಾಥ್ ಹರಕೆ ಹೊತ್ತಿದ್ದರು. ಅದರಂತೆ, ಗೆಲುವು ಸಾಧಿಸಿದ ದಿನವೇ ಬೆಂಬಲಿಗರೊಂದಿಗೆ ತೆರಳಿ ಮಾದಪ್ಪನಿಗೆ ನಮಿಸಿದ್ದಾರೆ.
ಮುಡಿ ಕೊಟ್ಟ ಕೈ ಶಾಸಕನ ಪುತ್ರ ಮುಡಿ ಕೊಟ್ಟ ಶಾಸಕರ ಪುತ್ರ:ಚಾಮರಾಜನಗರ ಕ್ಷೇತ್ರದಲ್ಲಿ ಸತತ ನಾಲ್ಕನೇ ಬಾರಿಗೆ ಸಿ. ಪುಟ್ಟರಂಗಶೆಟ್ಟಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶಾಸಕರ ಪುತ್ರ ಕುಸುಮರಾಜ್ ದೇವರಿಗೆ ಮುಡಿ ಕೊಟ್ಟಿದ್ದಾರೆ. ಸೋಮಣ್ಣ ಸ್ಪರ್ಧೆ ಬಳಿಕ ಚಾಮರಾಜನಗರ ಹೈ ವೋಲ್ಟೇಜ್ ಕ್ಷೇತ್ರವಾಗಿ ಬದಲಾಗಿತ್ತು. ಗೆಲ್ಲುವ ಉಮೇದಿನಲ್ಲಿ ಸೋಮಣ್ಣ ಇದ್ದರು. ಆದರೆ, ಎಲ್ಲಾ ಲೆಕ್ಕಾಚಾರವನ್ನು ಮತದಾರರು ಉಲ್ಟಾ ಮಾಡಿದ್ದು ಪುಟ್ಟರಂಗಶೆಟ್ಟಿ ಅವರಿಗೆ ಅನಾಯಸ ಗೆಲುವನ್ನು ತಂದುಕೊಟ್ಟಿದ್ದಾನೆ. ಇನ್ನು ಹಿರಿತನ, ಉಪ್ಪಾರ ಸಮುದಾಯದ ಏಕೈಕ ಶಾಸಕ ಆಗಿರುವ ಪುಟ್ಟರಂಗಶೆಟ್ಟಿ ಸಚಿವರಾಗುವ ರೇಸ್ ನಲ್ಲೂ ಇದ್ದಾರೆ.
ನಿನ್ನೆಯೆ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಮಾಡುವೆ ಎಂದಿದ್ದ ಮಂಜುನಾಥ್:ನಿನ್ನೆ ಗೆಲುವಿನ ನಂತರ ಚಾಮರಾಜನಗರದ ಮತ ಎಣಿಕೆ ಕೇಂದ್ರದಲ್ಲಿ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಮಂಜುನಾಥ್, ಹನೂರಿನ ಜನತೆ ನನ್ನನ್ನು ಮನೆ ಮಗನಂತೆ ಕಂಡು ಗೆಲುವಿಗೆ ಆಶೀರ್ವಾದ ಮಾಡಿದ್ದಾರೆ. ಅವರ ನಂಬಿಕೆ ಉಳಿಸಿಕೊಳ್ಳುವೆ.
ನನ್ನ ಮೇಲೆ ನಂಬಿಕೆ ಇಟ್ಟು, ಹಲವು ಭರವಸೆಗಳೊಂದಿಗೆ ಜನರು ನನಗೆ ಹರಸಿದ್ದಾರೆ. ಆದ್ಯತೆ ಮೇರೆಗೆ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಆಸ್ಪತ್ರೆ, ರಸ್ತೆಗಳನ್ನು ನಿರ್ಮಾಣ ಮಾಡುತ್ತೇನೆ, ಜನರ ಜೊತೆ ಸದಾ ಇರುತ್ತೇನೆ ಎಂದರು. ನಾನು ಗೆದ್ದರೆ ತಾಳಬೆಟ್ಟದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ನಡೆಸುವುದಾಗಿ ಹರಕೆ ಕಟ್ಟಿಕೊಂಡಿದ್ದೆ. ಅದರಂತೆ ಜನರ ಆಶೀರ್ವಾದ ಸಿಕ್ಕಿದೆ. ಭಗವಂತನ ಆಶೀರ್ವಾದ ಪಡೆಯಲು ಇಂದು ಬೆಂಬಲಿಗರ ಜೊತೆ ಪಾದಯಾತ್ರೆ ನಡೆಸಿ ಮಲೆಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದರು.
2018 ರ ಹನೂರು ವಿಧಾನಸಭಾ ಕ್ಷೇತ್ರದ ಫಲಿತಾಂಶ ನೋಡುವುದಾದರೆ, ಕಾಂಗ್ರೆಸ್ನಿಂದ ಆರ್.ನರೇಂದ್ರ-60,444 ಮತಗಳು, ಬಿಜೆಪಿಯಿಂದ ಪ್ರೀತನ್ ನಾಗಪ್ಪ 56,931 ಮತಗಳು, ಜೆಡಿಎಸ್ನಿಂದ ಎಂ.ಆರ್ ಮಂಜುನಾಥ್- 44957 ಮತಗಳನ್ನು ಪಡೆದಿದ್ದರು. 2018 ರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆರ್. ನರೇಂದ್ರ 3700 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2023 ರ ಚುನಾವಣೆ ಫಲಿತಾಂಶ ಉಲ್ಟಾ ಹೊಡೆದಿದ್ದು, 2018 ರಲ್ಲಿ ಸೋಲುಂಡಿದ್ದ ಜೆಡಿಎಸ್ ಈ ಬಾರಿ ಹನೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.
RO ಪ್ಲಾಂಟ್ ಪುಡಿಪುಡಿ:ನೆಚ್ಚಿನ ಅಭ್ಯರ್ಥಿ ಸೋತಿದ್ದಕ್ಕೆ ರೊಚ್ಚಿಗೆದ್ದ ಕೆಲವರು ಟಿಕೆಟ್ ವಂಚಿತ ನಿರ್ಮಿಸಿದ್ದ ಕುಡಿಯುವ ನೀರಿನ ಘಟಕವನ್ನು ಪುಡಿಪುಡಿ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಹನೂರು ವಿಧಾನಸಭಾ ಕ್ಷೇತ್ರದ ಹಲಗಾಪುರ ಗ್ರಾಮದಲ್ಲಿ "ನಮ್ಮ ನಿಶಾಂತ್ ಬಳಗ"ದಿಂದ ನಿರ್ಮಾಣ ಮಾಡಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೆಲವರು ಧ್ವಂಸಗೊಳಿಸಿದ್ದಾರೆ.
ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ. ಪ್ರೀತನ್ ನಾಗಪ್ಪ ಸೋಲು ಕಂಡ ಹಿನ್ನೆಲೆ ನಿಶಾಂತ್ ಬಳಗದ ವತಿಯಿಂದ ನಿರ್ಮಾಣ ಮಾಡಿದ್ದ ಶುದ್ಧ ಕುಡಿಯುವ ನೀರಿನ ಘಟಕವನ್ನು ಧ್ವಂಸಗೊಳಿಸಿರುವ ಆರೋಪ ಕೇಳಿಬಂದಿದೆ. ನಿಶಾಂತ್ ಕೂಡ ಹನೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಬಿಜೆಪಿ ಅಭ್ಯರ್ಥಿ ಸೋಲುತ್ತಿದ್ದಂತೆ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗ್ತಿದೆ. RO ಪ್ಲಾಂಟ್ ಧ್ಚಂಸವನ್ನು ಗ್ರಾಮದ ಮುಖಂಡರು ಖಂಡಿಸಿದ್ದಾರೆ.
ಇದನನ್ನೂ ಓದಿ:ಆಪ್ತ ಶಾಸಕರ ಜೊತೆ ಸಿದ್ದರಾಮಯ್ಯ ರಹಸ್ಯ ಸಭೆ