ಚಾಮರಾಜನಗರ:ಜಿಲ್ಲೆಯ ಮೂಗೂರು ಕ್ರಾಸ್ ಬಳಿ ಇಂದು ಮುಂಜಾನೆ 4 ಗಂಟೆಯ ಸುಮಾರಿಗೆ ಖಾಸಗಿ ಬಸ್ ಪಲ್ಟಿಯಾಗಿದೆ. ಮಲೆ ಮಹದೇಶ್ವರ ಬೆಟ್ಟದಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಉದಯರಂಗ ಎಂಬ ಬಸ್ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ. ಬಸ್ಸಿನಲ್ಲಿ 50 ರಿಂದ 60 ಜನ ಪ್ರಯಾಣಿಕರಿದ್ದರು. ಈ ಪೈಕಿ 30 ರಿಂದ 35 ಜನರಿಗೆ ಗಾಯಗಳಾಗಿವೆ. ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನು ಟಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿದ್ದಾರೆ. ಘಟನಾ ಸ್ಥಳ ಮೈಸೂರು ಜಿಲ್ಲೆಯ ಟಿ.ನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ್ದು ಚಾಮರಾಜನಗರ ಪೊಲೀಸರು ಮೈಸೂರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ಇದನ್ನೂ ಓದಿ:ದಟ್ಟ ಮಂಜು, ರಸ್ತೆ ಬದಿ ನಿಂತಿದ್ದವರ ಮೇಲೆ ಹರಿದ ಟ್ರಕ್; ಟಿಪ್ಪರ್ ಮನೆಗೆ ನುಗ್ಗಿ ಮೂವರು ಸಾವು
ಮಂಡ್ಯದಲ್ಲಿ ಬೈಕ್ ಅಪಘಾತ:ಬೆಳಗಿನ ಜಾವ ಮಂಜು ಮುಸುಕಿ ರಸ್ತೆ ಗುಂಡಿ ಕಾಣದೆ ಎರಡು ಬೈಕ್ಗಳು ಮುಖಾಮುಖಿಯಾಗಿ ಡಿಕ್ಕಿಯಾದ ಜಿಲ್ಲೆಯ ಕೊಮ್ಮೇರಹಳ್ಳಿ ಗ್ರಾಮದ ಬಳಿ ಶನಿವಾರ ನಡೆದಿದೆ. ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕೆರೆಗೋಡು ಗ್ರಾಮದ ಶಂಕ್ರೇಗೌಡ (58) ಎಂಬವರು ಪತ್ನಿಯೊಂದಿಗೆ ಮಂಡ್ಯದಿಂದ ಕೆರೆಗೋಡು ಗ್ರಾಮಕ್ಕೆ ತೆರಳುತ್ತಿದ್ದರು. ಬೆಳಗಿನ ಜಾವ ವಿಪರೀತ ಮಂಜು ಕವಿದಿದ್ದು ರಸ್ತೆ ಗುಂಡಿ ಕಾಣದೆ ಎದುರಿನಿಂದ ಬರುತ್ತಿದ್ದ ಬೈಕ್ಗೆ ಮುಖಾಮುಖಿಯಾಗಿ ಡಿಕ್ಕಿಯಾಗಿದೆ. ಕೊಪ್ಪ ಸಕ್ಕರೆ ಕಾರ್ಖಾನೆಯ ಉದ್ಯೋಗಿ ಮಹೇಂದ್ರ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಮಂಡ್ಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ರಸ್ತೆ ಗುಂಡಿಯೇ ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ.