ಚಾಮರಾಜನಗರ : ಬಿಜೆಪಿ ಹಾಗೂ ಕಾಂಗ್ರೆಸ್ ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳಿದ್ದ ಹಾಗೆ. ಎರಡೂ ಒಂದೇ ರೀತಿಯವು. ಆದರೆ ಬುದ್ಧ, ಬಸವ, ಅಂಬೇಡ್ಕರ್ ತತ್ವದ ಆಧಾರದ ಮೇಲೆ ಬಿಎಸ್ಪಿ ಹುಟ್ಟಿರುವುದು ಎಂದು ಶಾಸಕ ಮಹೇಶ್ ಹೇಳಿದ್ದಾರೆ.
ನಗರದ ತಾಲೂಕು ಕಚೇರಿ ಮೈದಾನದಲ್ಲಿ ನಡೆದ ಬಿಎಸ್ಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಕಾಂಗ್ರೆಸ್ ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳ ರೀತಿ ಎರಡೂ ಒಂದೇ ರೀತಿಯವು. ಆದರೆ ಬುದ್ಧ, ಬಸವ, ಅಂಬೇಡ್ಕರ್ ತತ್ವದ ಆಧಾರದ ಮೇಲೆ ಬಿಎಸ್ಪಿ ಹುಟ್ಟಿರುವುದು ಎಂದರು.
ನಾವು ಮೋದಿಯವರನ್ನು ಸಂಸದೀಯ ಮಾತುಗಳಿಂದಲೇ ಪ್ರಶ್ನಿಸುತ್ತೇವೆ. 10 ಕೋಟಿ ಉದ್ಯೋಗ ಕೊಡುವುದಾಗಿ ಹೇಳಿದ್ದರು. ಉದ್ಯೋಗವೆಲ್ಲಿ ನೀಡಿದ್ದಾರೆ. ಕಪ್ಪು ಹಣ ತರುವುದಾಗಿ ಹೇಳಿದ್ದರು. ಕಪ್ಪು ಹಣ ಎಲ್ಲಿ ತಂದಿದ್ದಾರೆ. ಇದಕ್ಕೆಲ್ಲಾ ಪ್ರಧಾನಿ ಉತ್ತರದಾಯಿಗಳು. ಅಂಬಾನಿ-ಅದಾನಿಯನ್ನು ಸೇಫ್ ಮಾಡಲು ನೋಟ್ ಬ್ಯಾನ್ ಮಾಡಿದರು ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಒಳ ಒಪ್ಪಂದವಿಲ್ಲ:
ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ ಅವರೊಂದಿಗೆ ಬಿಎಸ್ಪಿ ಒಪ್ಪಂದ ಮಾಡಿಕೊಂಡಿದೆ ಎಂಬುದನ್ನು ನಂಬಬೇಡಿ. ಬಹುಜನ ಚಳವಳಿಗೆ ಮೋಸ ಮಾಡುವುದು ಒಂದೇ, ತಾಯಿಗೆ ಮೋಸ ಮಾಡುವುದು ಒಂದೇ ಎಂದು ಒಳ ಒಪ್ಪಂದದ ಮಾತಿಗೆ ಸ್ಪಷ್ಟನೆ ನೀಡಿದರು.
ಅಭ್ಯರ್ಥಿಗಳ ಹುಡುಕಾಟ ನಡೆಯುತ್ತಿದ್ದು, ರಾಜ್ಯ ಸಮಿತಿ ಸೂಚಿಸುವ ಅಭ್ಯರ್ಥಿ ಪರ ಕಾರ್ಯಕರ್ತರು ಕೆಲಸ ಮಾಡಿ ಗೆಲ್ಲಿಸಿಕೊಡಬೇಕು. ಚಾಮರಾಜನಗರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುವ ಎಲ್ಲಾ ಅವಕಾಶಗಳಿವೆ. ಈ ಬಾರಿ ಕಾಂಗ್ರೆಸ್ ಗೆಲ್ಲುವ ಸಂಖ್ಯೆಗಿಂತ ಹೆಚ್ಚು 5 ಸ್ಥಾನ ಬಿಎಸ್ಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.