ಚಾಮರಾಜನಗರ:ಹನೂರು ಹಾಗೂ ಕೊಳ್ಳೇಗಾಲದಲ್ಲಿ ಅಮಿತ್ ಶಾ ಜೊತೆ ಜಂಟಿ ಪ್ರಚಾರದ ಬಳಿಕ ಗುಂಡ್ಲುಪೇಟೆ ಮತ್ತು ಚಾಮರಾಜನಗರದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬಿಜೆಪಿ ಪರ ಮತಯಾಚಿಸಿದರು. ಚಾಮರಾಜನಗರ ಹಾಗೂ ಗುಂಡ್ಲುಪೇಟೆ ಎರಡು ಕ್ಷೇತ್ರಗಳಲ್ಲೂ ಲಿಂಗಾಯತ ಪ್ರಾಬಲ್ಯ ಇರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಪ್ರಚಾರ ಬಿಜೆಪಿಗೆ ಎನರ್ಜಿ ಕೊಟ್ಟಿದೆ ಎಂದರೆ ತಪ್ಪಾಗಲಾರದು.
ಗುಂಡ್ಲುಪೇಟೆ ಪ್ರಚಾರ ಸಭೆಯಲ್ಲಿ ಯಡಿಯೂರಪ್ಪ ಮಾತನಾಡಿ, ಮನೆಗೆ ಹೋಗುವ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್‍ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ, ದೇಶದ ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಮುಳುಗುವ ಹಡಗಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಠೇವಣಿ ಕಳೆದುಕೊಳ್ಳಬೇಕಾದ ಪರಿಸ್ಥಿತಿಗೆ ಬಂದಿದ್ದು, ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿಯುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾಗೆ ರಾಹುಲ್ ಗಾಂಧಿ ಸಮನಲ್ಲ. ರಾಜ್ಯದಲ್ಲಿ ಮೋದಿ ಹಾಗೂ ಶಾ ನೇತೃತ್ವದಲ್ಲಿ ಬದಲಾವಣೆ ತರುವುದು ನಿಶ್ಚಿತ. ದೇಶಕ್ಕೆ ನೀವೇನು ಮಾಡಿದ್ದಿರಿ ಎಂದು ಕಾಂಗ್ರೆಸ್ ಕೇಳುತ್ತದೆ. ಆದರೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಚುನಾವಣೆಗೆ ನಿಲ್ಲಿಸಿ ಸೋಲಿಸಿ ಅಪಮಾನ ಮಾಡಿರುವುದು ಕಾಂಗ್ರೆಸ್ ಪಕ್ಷ. ಈ ಮೂಲಕ ದೇಶದ ಜನರಿಗೆ ಕಾಂಗ್ರೆಸ್ ಮೋಸ ಮಾಡಿದೆ. ಈ ಹಿಂದೆ ಹಣ, ಹೆಂಡ, ತೋಳಿನ ಬಲದಿಂದ ಜಾತಿಯ ವಿಷಬೀಜ ಬಿತ್ತಿ ಕಾಂಗ್ರೆಸ್ ಗೆಲ್ಲುವ ಕಾಲವಿತ್ತು. ಆದರೆ ಇದೀಗ ಯುವಕರು ಜಾಗೃತರಾಗಿದ್ದು, ನಿಮ್ಮ ರಾಜಕೀಯ ಆಟ ನಡೆಯುವುದಿಲ್ಲ ಎಂದು ಬಿಎಸ್ವೈ ಛೇಡಿಸಿದರು.
ವರುಣದಲ್ಲಿ ಈಗಾಗಲೇ ಕೇಂದ್ರ ಸಚಿವ ಅಮಿತ್ ಶಾ ಜೊತೆಗೆ ಮತಯಾಚನೆ ಮಾಡಿದ್ದೇನೆ. ಈ ಮೂಲಕ ವಿ.ಸೋಮಣ್ಣ ವರುಣಾದಲ್ಲಿ 25-30 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಅವರ ಪ್ರತಿ ಸ್ಪರ್ಧಿ ಸೋಲು ನಿಶ್ಚಿತ. ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಹಿಂದೆಮುಂದೆ ನೋಡುವ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಿದೆ.