ಚಾಮರಾಜನಗರ: ಬಿಆರ್‌ಟಿಯಲ್ಲಿ ಕಾಡುಗಳ್ಳರ ಪಾಲಿಗೆ ಸಿಂಹಸ್ವಪ್ನವಾಗಬೇಕಿದ್ದ, ಅರಣ್ಯ ಅಪರಾಧಗಳನ್ನು ಪತ್ತೆಹಚ್ಚಿ ಮಹಾನ್ ಪತ್ತೆದಾರಿ ಎನಿಸಿಕೊಳ್ಳಬೇಕಿದ್ದ ಸ್ನೈಪರ್ ಡಾಗ್ ಝಾನ್ಸಿ ಇತ್ತೀಚೆಗೆ ಅಪಘಾತದಲ್ಲಿ ಅಸುನೀಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಡಿಸೆಂಬರ್ 30ರಂದು ಪುಣಜನೂರು ಕಚೇರಿ ಎದುರು ಇರುವ ರಸ್ತೆಯಲ್ಲಿ ಬೀದಿನಾಯಿ ಅಟ್ಟಿಸಿಕೊಂಡು ಹೋದ ಝಾನ್ಸಿಗೆ ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಕಠಿಣ ತರಬೇತಿ ಪಡೆದಿದ್ದ ಝಾನ್ಸಿ:ಸರ್ಕಾರೇತರ ಸಂಸ್ಥೆಯಾದ ಟ್ರಾಫಿಕ್ ಮತ್ತು ವಿಶ್ವ ವನ್ಯಜೀವಿ ನಿಧಿ(ವರ್ಲ್ಡ್ ವೈಲ್ಡ್ಲೈಫ್ ಫಂಡ್) ಇಂಡಿಯಾ ವತಿಯಿಂದ ಚಂಡೀಗಢ ಇಂಡೋ - ಟಿಬೇಟಿನ್ ಬಾರ್ಡರ್ ಪೊಲೀಸ್ ಪೋರ್ಸ್ (ಐಟಿಬಿಪಿ) ನಲ್ಲಿ ಝಾನ್ಸಿ ಸುಮಾರು ಆರೇಳು ತಿಂಗಳು ಕಠಿಣ ತರಬೇತಿ ಪಡೆದು ಬಂದಿದ್ದಳು. ಝಾನ್ಸಿ ನೋಡಿಕೊಳ್ಳಲು ಅರಣ್ಯ ಇಲಾಖೆ ಗಾರ್ಡ್ ಬಸವರಾಜುಗೆ ಹ್ಯಾಂಡ್ಲರ್ ತರಬೇತಿಯನ್ನೂ ನೀಡಲಾಗಿತ್ತು.
ಝಾನ್ಸಿಗೆ ತರಬೇತಿಯಲ್ಲಿ ಬಾಂಬ್ ಪತ್ತೆ, ದುಷ್ಕರ್ಮಿಗಳು ಮತ್ತು ವಸ್ತುಗಳ ವಾಸನೆ ಗ್ರಹಿಸುವಿಕೆ, ಅಪರಾಧಿಗಳ ಬೆನ್ನತ್ತುವ ಚಾಣಾಕ್ಷತೆ ಬಗ್ಗೆ ಕಲಿಸಲಾಗಿತ್ತು. ಈ ತರಬೇತಿಯಲ್ಲಿ ಹಲವು ಶ್ವಾನಗಳು ಮತ್ತು ಹ್ಯಾಂಡ್ಲರ್ಸ್‌ಗಳು ಭಾಗವಹಿಸಿದ್ದರು. ಭಾರತೀಯ ರೈಲ್ವೆಯ ದಕ್ಷಿಣ ಮತ್ತು ಪಶ್ಚಿಮ ಮಧ್ಯಪ್ರದೇಶ, ಛತ್ತೀಸ್‌ಗಡ, ಒಡಿಶಾ ಅರಣ್ಯ ಇಲಾಖೆ, ಉತ್ತರಪ್ರದೇಶ, ಗುಜರಾತ್, ತಮಿಳುನಾಡು ಅರಣ್ಯ ಇಲಾಖೆಗೆ ಒಂದೊಂದು ಶ್ವಾನ ನೀಡಲಾಗಿತ್ತು. ಅದರಂತೆ, ಕರ್ನಾಟಕದಲ್ಲಿ ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶಕ್ಕೆ ಝಾನ್ಸಿ ಸಿಕ್ಕಿದ್ದಳು.
2021ರ ನವೆಂಬರ್‌ನಲ್ಲಿ ಅರಣ್ಯ ಇಲಾಖೆ ಕಚೇರಿಗೆ ಬಂದ ಝಾನ್ಸಿ ಎದುರು ಅಂದಿನ ಹುಲಿ ಯೋಜನೆ ನಿರ್ದೇಶಕ ಸಂತೋಷ್ ಕುಮಾರ್ ನಿಂತಿದ್ದರು. ಹ್ಯಾಂಡ್ಲರ್ ಸೂಚನೆ ಕೊಟ್ಟ ಕೂಡಲೇ ತನ್ನ ಗ್ರಹಿಕಾ ಶಕ್ತಿ ಪ್ರದರ್ಶಿಸಿ, ಝಾನ್ಸಿ ಅಧಿಕಾರಿಗಳಿಗೆ ಗೌರವ ಸಲ್ಲಿಸಿದ್ದಳು. ಈ ವಿಡಿಯೋ ಇಂದಿಗೂ ಬಿಆರ್‌ಟಿ ಅರಣ್ಯ ಇಲಾಖೆಯ ಟ್ವಿಟರ್‌ನಲ್ಲಿದೆ. ಆದರೆ, ಕೆಲವು ದಿನಗಳ ಹಿಂದೆ ಮೃತಪಟ್ಟ ಝಾನ್ಸಿಗೆ ಸಂತಾಪ ಸಲ್ಲಿಸುವ ಯಾವುದೇ ಪೋಸ್ಟ್ ಕೂಡ ಇಲ್ಲ.