ಕರ್ನಾಟಕ

karnataka

ETV Bharat / state

ಪರಿಸರವಾದಿಗಳ ಆಕ್ರೋಶ: ಆರಂಭವಾಗಬೇಕಿದ್ದ ನುಗು ಸಫಾರಿಗೆ ಬ್ರೇಕ್​​ - ಚಾಮರಾಜನಗರ ಲೆಟೆಸ್ಟ್ ನ್ಯೂಸ್

ಬಂಡೀಪುರ ಸಫಾರಿಯಲ್ಲಿ ಒತ್ತಡ ಹೆಚ್ಚಾಗುತ್ತಿದ್ದು, ಪ್ರಾಣಿ ದರ್ಶನ ಇಲ್ಲದೇ ಹಿಂತಿರುಗುವ ಬದಲು ''ನುಗು''ವಿನಲ್ಲೂ ಸಫಾರಿ ಆರಂಭಿಸಿದರೆ ಒತ್ತಡ ಕಡಿಮೆಯಾಗಲಿದೆ ಎಂಬುದು ಪರ ಇರುವವರ ವಾದ..

break for Nugu safari
ಪರಿಸರವಾದಿಗಳ ಆಕ್ರೋಶ: ಆರಂಭವಾಗಬೇಕಿದ್ದ ನುಗು ಸಫಾರಿಗೆ ಬ್ರೇಕ್​​

By

Published : Oct 27, 2020, 7:18 PM IST

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ನುಗು ವನ್ಯಜೀವಿ ವಲಯದಲ್ಲಿ ಆರಂಭವಾಗಬೇಕಿದ್ದ ನುಗು ಸಫಾರಿಗೆ ಬ್ರೇಕ್ ಬಿದ್ದಿದೆ.

ಇದೇ 30 ರಿಂದ ನುಗುವಿನಲ್ಲಿ ಬೆಳಗ್ಗೆ ಮತ್ತು‌ ಸಂಜೆ ಸಫಾರಿ ಆರಂಭಿಸಲು ಅರಣ್ಯ ಇಲಾಖೆ ನಿರ್ಧರಿಸಿ ಸಕಲ ತಯಾರಿಯನ್ನು ನಡೆಸಿತ್ತು.‌ ಈ ಕುರಿತ ಆಹ್ವಾನ ಪತ್ರಿಕೆಯೂ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್​ ಆಗಿತ್ತು.‌ ಆದರೆ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಆರಂಭಿಸುತ್ತಿದ್ದರಿಂದ ಪರಿಸರವಾದಿಗಳು, ಕೆಲ ನಿವೃತ್ತ ಅರಣ್ಯ ಅಧಿಕಾರಿಗಳು ಆಕ್ಷೇಪಿಸಿದ್ದರು ಎಂದು ತಿಳಿದು ಬಂದಿದೆ.

ಈ ಮೊದಲು ಹೊರಡಿಸಿದ್ದ ಆಹ್ವಾನ ಪತ್ರಿಕೆ

ಪರ- ವಿರೋಧ :ಇದೇ 30ಕ್ಕೆ ಆರಂಭಿಸಲು ಉದ್ದೇಶಿಸಿದ್ದ ನುಗು ಸಫಾರಿಗೆ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.‌ ನುಗು ಕೇವಲ 30 ಚದರ್​ ಕಿ.ಮೀ. ವ್ಯಾಪ್ತಿಯ ಪ್ರದೇಶವಾಗಿದ್ದು, ಅತಿಸೂಕ್ಷ್ಮ ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರಲಿದೆ. ಸುಪ್ರೀಂಕೋರ್ಟ್ ಕೂಡ ಪ್ರವಾಸೋದ್ಯಮಕ್ಕೆ ಮಿತಿ ಹೇರಿದ್ದು, ಸಫಾರಿ ಆರಂಭವಾದರೆ ಕೋರ್ಟ್ ಸೂಚನೆ ಉಲ್ಲಂಘನೆ ಜೊತೆಗೆ ಪ್ರಾಣಿ-ಮಾನವ ಸಂಘರ್ಷ ಹೆಚ್ಚಾಗಲಿದೆ.

ಎನ್​ಟಿಸಿಎ ಗಮನಕ್ಕೂ ತಾರದೆ ಆರಂಭಿಸಲಾಗುತ್ತಿದ್ದು, ವನ್ಯಜೀವಿಗಳ ಅವಾಸ ಸ್ಥಾನಕ್ಕೆ ಕುತ್ತು ತರಲಿದೆ ಎಂಬುದು ಪರಿಸರವಾದಿಗಳ ವಾದವಾಗಿದೆ. ಬಂಡೀಪುರ ಸಫಾರಿಯಲ್ಲಿ ಒತ್ತಡ ಹೆಚ್ಚಾಗುತ್ತಿದ್ದು, ಪ್ರಾಣಿ ದರ್ಶನ ಇಲ್ಲದೇ ಹಿಂತಿರುಗುವ ಬದಲು ''ನುಗು''ವಿನಲ್ಲೂ ಸಫಾರಿ ಆರಂಭಿಸಿದರೆ ಒತ್ತಡ ಕಡಿಮೆಯಾಗಲಿದೆ ಎಂಬುದು ಪರ ಇರುವವರ ವಾದವಾಗಿದೆ.

ಈ ಕುರಿತು ಬಂಡೀಪುರ ಸಿಎಫ್​​ಒ ಬಾಲಚಂದ್ರ 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿ, ನುಗುವಿನಲ್ಲಿ‌ ಸಫಾರಿ ಆರಂಭಿಸಲು ಎನ್​ಟಿಸಿಎ ಅನುಮತಿಯ ಅಗತ್ಯವಿರಲಿಲ್ಲ. ಈಗ, ಅನುಮತಿ ಪಡೆಯಬೇಕೆಂದು ಹೇಳಿರುವುದರಿಂದ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅ. 30 ರಂದು ನುಗು ಸಫಾರಿ ಆರಂಭವಾಗುವುದಿಲ್ಲ ಎಂದು‌ ಸ್ಪಷ್ಟಪಡಿಸಿದರು.

ನುಗು ಸಫಾರಿ ಕುರಿತು ಪರಿಸರವಾದಿ ಜೋಸೆಫ್ ಹೂವರ್ ಮಾತನಾಡಿ, ಸಫಾರಿ ಎಲ್ಲಿ ಮಾಡಿದರೂ ಪ್ರಾಣಿಗಳಿಗೆ ತೊಂದರೆ ಆಗಲಿದೆ.‌ ಕೆಲವು ಕಡೆ ಹಗಲು-ರಾತ್ರಿ ಎರಡೂ ಸಫಾರಿ ಇದ್ದು, ಮೊದಲು ರಾತ್ರಿ‌ ಸಫಾರಿಗೆ ನಿರ್ಬಂಧ ಹೇರಬೇಕು. ನುಗು ಸಫಾರಿಗೆ ಅನುಮತಿ ಪಡೆದ ನಂತರ ಬೇಕಾದರೇ ಆರಂಭಿಸಲಿ ಎಂದರು.

ABOUT THE AUTHOR

...view details