ಚಾಮರಾಜನಗರ: ಗಡಿಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮೆದುಳು ಜ್ವರ ಶಂಕಿತ ಪ್ರಕರಣವು ಹನೂರು ಪಟ್ಟಣದ 10ನೇ ವಾರ್ಡ್ನಲ್ಲಿ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಪಟ್ಟಣದ 4 ವರ್ಷದ ಬಾಲಕಿಗೆ ಮೆದುಳು ಜ್ವರ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಗೌರಿ-ಗಣೇಶ ಹಬ್ಬದ ಸಡಗರದಲ್ಲಿದ್ದ ಜನರಲ್ಲಿ ಮಂಕು ಕವಿದಿದೆ.
ಮೆದುಳು ಜ್ವರ ಕಾಣಿಸಿಕೊಳ್ಳಲು ಅನೈರ್ಮಲ್ಯ ತಾಂಡವವಾಡುತ್ತಿರುವುದೇ ಕಾರಣವಾಗಿದ್ದು, ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ 10ನೇ ವಾರ್ಡ್ನ ಬನ್ನಿಮಂಟಪ ಬಡಾವಣೆಯಲ್ಲಿ ಸಮರ್ಪಕ ಸಿಸಿ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮನೆ ಮುಂದಿನ ಖಾಲಿ ನಿವೇಶನದಲ್ಲಿ ಕೊಳಚೆ ನೀರು ನಿಂತುಕೊಂಡಿದೆ. ಕಸ-ಕಡ್ಡಿಗಳು ಕೊಳಚೆ ನೀರಿನಲ್ಲಿ ಕೊಳೆತು ಗಬ್ಬು ನಾರುತ್ತಿದ್ದು, ಪ. ಪಂ ನಿರ್ಲಕ್ಷ್ಯಕ್ಕೆ ಜನರು ಈಗ ಜ್ವರ ಬರುವ ಭೀತಿಯಲ್ಲಿದ್ದಾರೆ.
ಆತಂಕ ಪಡುವ ಅಗತ್ಯವಿಲ್ಲ:"ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವಾರ್ಡ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಂಡಿದ್ದು, ಬಾಲಕಿ ಕುಟುಂಬಸ್ಥರಿಗೆ ಆತಂಕಗೊಳ್ಳದಂತೆ ಧೈರ್ಯ ಹೇಳಿ ಬಂದಿದ್ದಾರೆ. ಮೈಸೂರಿಗೆ ರಕ್ತದ ಮಾದರಿ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದೇವೆ. ಆತಂಕ ಪಡುವ ಅಗತ್ಯವಿಲ್ಲ" ಎಂದು ಡಿಹೆಚ್ಒ ಡಾ ವಿಶ್ವೇಶ್ವರಯ್ಯ ತಿಳಿಸಿದ್ದಾರೆ.