ಚಾಮರಾಜನಗರ:ಇರುವೆಗೆ ಸಿಂಪಡಿಸುವ ಇರುವೆ ನಾಶಕ ತಿಂದು 5 ವರ್ಷದ ಬಾಲಕ ಅಸುನೀಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಪುಟ್ಟಿರಮ್ಮನ ದೊಡ್ಡಿ ಎಂಬ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕ್ಯಾತೆಗೌಡ ಎಂಬುವರ 5 ವರ್ಷದ ಮಗ ಶಿವು ಸಾವನ್ನಪ್ಪಿದ ಬಾಲಕ. ಕ್ಯಾತೆಗೌಡ ತಮ್ಮ ಮನೆಯ ಹಿತ್ತಲಿನ ಕಿಟಕಿಯಲ್ಲಿ ಇರುವೆಗೆ ಸಿಂಪಡಿಸುವ ಔಷಧವನ್ನು ತಂದಿಟ್ಟಿದ್ದರು. ಮಗು ಆಟವಾಡುವ ಸಮಯದಲ್ಲಿ ಇರುವೆ ಪುಡಿಯನ್ನು ತಿಂದು ನರಳಾಡುತ್ತಿತ್ತು. ಇದನ್ನು ಗಮನಿಸಿದ ಪೋಷಕರು ತಕ್ಷಣ ಕಾಮಗೆರೆ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ ಆರ್ ಆಸ್ಪತ್ರೆಗೆ ರವಾನಿಸಿದ್ದರು. ಆದರೆ, ಮಗು ಚಿಕಿತ್ಸೆಗೆ ಫಲಿಸದೇ ಗುರುವಾರ ರಾತ್ರಿ ಮೃತಪಟ್ಟಿದೆ. ಈ ಸಂಬಂಧ ಕೊಳ್ಳೇಗಾಲದ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಿಳೆ ಸರ ಕಸಿದು ಇಬ್ಬರು ಪರಾರಿ : ಮಹಿಳೆಯೊಬ್ಬರ ಸರ ಕಸಿದು ಬೈಕಿನಲ್ಲಿ ಇಬ್ಬರು ಪರಾರಿಯಾಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಚಿಲಕವಾಡಿ ಗ್ರಾಮದ ಸಮೀಪ ರಾತ್ರಿ ವೇಳೆ ನಡೆದಿದೆ. ನಿರ್ಮಲ ಎಂಬುವವರು ಸರ ಕಳೆದುಕೊಂಡವರು ಎಂಬುದು ತಿಳಿದು ಬಂದಿದೆ. ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ತೆರಳುವಾಗ ಬೈಕಿನಲ್ಲಿ ಬಂದ ಇಬ್ಬರು ಖದೀಮರು ಸರವನ್ನು ಕಸಿದು ಪರಾರಿಯಾಗಿದ್ದಾರೆ. ಅಂದಾಜು 35 ಗ್ರಾಂನ ಮಾಂಗಲ್ಯ ಸರ ಇದಾಗಿದೆ ಎಂಬುದು ತಿಳಿದು ಬಂದಿದೆ. ಅಗರ ಮಾಂಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಅಕ್ರಮ ಅಕ್ಕಿ ಸಾಗಾಟ : ಪ್ಯಾಸೆಂಜರ್ ಆಟೋದಲ್ಲಿ ಅಕ್ರಮವಾಗಿ ಅಕ್ಕಿ ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅಕ್ಕಿ ಸಮೇತ ಬಂಧಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರಲ್ಲಿ ನಡೆದಿದೆ. ಮೈಸೂರು ನಗರ ಮೂಲದ ನದೀಂ ಪಾಶ, ಆಯೂಬ್ ಬಂಧಿತ ಆರೋಪಿಗಳು. ಬೇಗೂರು ಕಡೆಯಿಂದ ಮೈಸೂರು ಕಡೆಗೆ ಪ್ಯಾಸೆಂಜರ್ ಆಟೋದಲ್ಲಿ ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದಾರೆಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದರು. ಪ್ಯಾಸೆಂಜರ್ ಆಟೋದಲ್ಲಿ ಸಮಾರು 800 ಕೆಜಿಯಷ್ಟು ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.