ಚಾಮರಾಜನಗರ:ಕೊರೊನಾ ಭೀತಿಯಿಂದ ರಕ್ತದಾನಿಗಳು ಆಸ್ಪತ್ರೆಗೆ ಮುಖ ಮಾಡದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿರುವ ರಕ್ತನಿಧಿ ಕೇಂದ್ರದಲ್ಲಿ ರಕ್ತದ ಕೊರತೆ ಉಲ್ಬಣವಾಗಿದೆ.
ಕೊರೊನಾ ಭೀತಿ ಹಾಗೂ ಲಸಿಕೆ ಪಡೆದ ನಂತರ 15 ದಿನಗಳವರೆಗೆ ರಕ್ತದಾನ ಮಾಡಬಾರದು ಎಂಬ ಮಾರ್ಗಸೂಚಿ ಇರುವುದರಿಂದ ನಿತ್ಯ ಸರಾಸರಿ 25 ರಿಂದ 28 ಯೂನಿಟ್ ರಕ್ತ ಬೇಡಿಕೆಯಲ್ಲಿದೆ. ಆದರೆ, 17-18 ಯೂನಿಟ್ ಅಷ್ಟೇ ಈಗ ಸಂಗ್ರಹವಾಗುತ್ತಿದ್ದು, ರೋಗಿಗಳ ಸಂಬಂಧಿಕರ ಪರದಾಟ ಸಾಮಾನ್ಯವಾಗಿದೆ.
2020 ಮಾರ್ಚ್ನಿಂದ 2021 ಏಪ್ರಿಲ್ವರೆಗೆ 3,469 ಯೂನಿಟ್ ರಕ್ತ ಸಂಗ್ರಹವಾಗಿದ್ದರೆ, 3,588 ಯೂನಿಟ್ ರಕ್ತ ನೀಡಲಾಗಿದೆ. ಕಳೆದ ಮೇನಲ್ಲಿ ಕೇವಲ 73 ಯೂನಿಟ್ ರಕ್ತ ಸಂಗ್ರಹವಾಗಿದ್ದು, 176 ಯೂನಿಟ್ ರಕ್ತ ಪೂರೈಕೆ ಮಾಡಿದ್ದಾರೆ. ಜೂನ್ನಲ್ಲಿ ಈ ಸಂಖ್ಯೆ ರಕ್ತ ಸಂಗ್ರಹ 234 ಯೂನಿಟ್ ಇದ್ದರೆ ಪೂರೈಕೆ ಇದಕ್ಕಿಂತ ಹೆಚ್ಚಿದ್ದು, ಇದೇ ರೀತಿ ಇಂದಿಗೂ ಮುಂದುವರಿದಿದೆ.
ಜಿಲ್ಲೆಯಲ್ಲಿ ಏಕೈಕ ಬ್ಲಡ್ ಬ್ಯಾಂಕ್ ಇದ್ದು, ಇಲ್ಲಿಂದ ಖಾಸಗಿ ಆಸ್ಪತ್ರೆಗಳು, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಪೂರೈಕೆ ಮಾಡಬೇಕಾದ ಅನಿವಾರ್ಯತೆ ಒಂದೆಡೆಯಾದರೆ, ರಕ್ತ ನಿಧಿ ಕೇಂದ್ರದಲ್ಲಿ ಅಗತ್ಯ ರಕ್ತ ಸಂಗ್ರಹವಿಲ್ಲದೇ ದಾನಿಗಳಿಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ.