ಚಾಮರಾಜನಗರ: ತೀವ್ರ ಕುತೂಹಲ ಕೆರಳಿಸಿದ್ದ ಚಾಮರಾಜನಗರ ನಗರಸಭೆಯಲ್ಲಿ 11 ವರ್ಷಗಳ ಬಳಿಕ ಕಮಲ ಅರಳಿದ್ದು, ಆಶಾ ನಟರಾಜು ಅಧ್ಯಕ್ಷೆಯಾಗಿ, ಸುಧಾ ಉಪಾಧ್ಯಕ್ಷೆಯಾಗಿ ಗದ್ದುಗೆ ಏರಿದ್ದಾರೆ.
ಬಿಜೆಪಿಯ ಮಮತಾ ಬಾಲಸುಬ್ರಹ್ಮಣ್ಯ ಹಾಗೂ ಸುಧಾ ನಡುವೆ ಅಧ್ಯಕ್ಷೀಯ ಪದವಿಗಾಗಿ ತೀವ್ರ ಪೈಪೋಟಿ ನಡೆದು, ಹಲವು ಸಭೆಗಳ ಬಳಿಕ ಇಂದು ಬೆಳಗ್ಗೆ 10 ರ ಸುಮಾರಿಗೆ ಆಶಾ ನಟರಾಜು ಹೆಸರು ಅಂತಿಮವಾಗಿ ನಾಮಪತ್ರ ಸಲ್ಲಿಸಿದರು.
11 ವರ್ಷದ ಬಳಿಕ ಬಿಜೆಪಿ ತೆಕ್ಕೆಗೆ ಚಾಮರಾಜನಗರ ನಗರಸಭೆ! ಬಿಎಸ್ಪಿ, ಸಂಸದರ ಮತದಿಂದ ಗೆಲವು: ಸಂಸದ, ಶಾಸಕರಿಗೂ ಮತದಾನ ಹಕ್ಕಿರುವುದರಿಂದ ವಿ.ಶ್ರೀನಿವಾಸಪ್ರಸಾದ್ ಮತ್ತು ಬಿಎಸ್ಪಿಯಿಂದ ಆಯ್ಕೆಯಾಗಿ ಈಗ ಶಾಸಕ ಮಹೇಶ್ ಬೆಂಬಲಿಗರಾದ ಪ್ರಕಾಶ್ ಬಿಜೆಪಿಗೆ ಮತ ನೀಡುವ ಮೂಲಕ ಕಮಲ ಜಯಭೇರಿ ಬಾರಿಸಿತು.
ಫಲಿಸದ ಕೈ ತಂತ್ರ:ಕಾಂಗ್ರೆಸ್ನಿಂದ ಅಧ್ಯಕ್ಷ ಆಕಾಂಕ್ಷಿಯಾಗಿ ಶಾಂತಿ, ಉಪಾಧ್ಯಕ್ಷೆ ಆಕಾಂಕ್ಷಿಯಾಗಿ ಚಂದ್ರಕಲಾ ನಾಮಪತ್ರ ಸಲ್ಲಿಸಿದ್ದರು. ಎಸ್ಡಿಪಿಐ, ಪಕ್ಷೇತರ ಹಾಗೂ ಬಿಎಸ್ಪಿ ಸದಸ್ಯರೆಲ್ಲರ ಮತ ಪಡೆದು ಅಧಿಕಾರ ಉಳಿಸಿಕೊಳ್ಳಲು ರಣತಂತ್ರ ಹೆಣೆದಿತ್ತು. ಆದರೆ ಬಿಎಸ್ಪಿ ಸದಸ್ಯ ಕಮಲಕ್ಕೆ ಜೈ ಎನ್ನುವ ಮೂಲಕ ಕೈ ರಣತಂತ್ರ ವಿಫಲಗೊಳಿಸಿದರು. ಇದರೊಟ್ಟಿಗೆ ಶಾಸಕ ಪುಟ್ಟರಂಗಶೆಟ್ಟಿ ಅಧಿಕಾರ ಉಳಿಸಿಕೊಳ್ಳಲಾಗದೇ ಮುಖಭಂಗ ಅನುಭವಿಸಿದರು. ಶಾಸಕ ಹಾಗೂ ಪಕ್ಷೇತರ ಸದಸ್ಯ ಬಸವಣ್ಣ ಮತ ಚಲಾಯಿಸಲು ಬಾರದಿದ್ದರಿಂದ ಕಾಂಗ್ರೆಸ್ 14 ಹಾಗೂ ಬಿಜೆಪಿ 17 ಮತಗಳನ್ನು ಪಡೆಯಿತು.
2009 ರಲ್ಲಿ ಮಹಾದೇವ ನಾಯ್ಕ ಎಂಬುವರು ಅಧ್ಯಕ್ಷರಾಗುವ ಮೂಲಕ ಮೊದಲ ಬಾರಿ ಚಾಮರಾಜನಗರದಲ್ಲಿ ಕಮಲ ಅರಳಿಸಿದ್ದರು. ಅದಾದ ಬಳಿಕ ಈಗ ಬಿಜೆಪಿ ತೆಕ್ಕೆಗೆ ನಗರಸಭೆ ಬಂದಿದೆ.