ಚಾಮರಾಜನಗರ: ಈಗ ಕಾಂಗ್ರೆಸ್‌ಮುಕ್ತ ಭಾರತ ಆಗುತ್ತಿದ್ದು ವಿರೋಧ ಪಕ್ಷ ಆಗುವುದಕ್ಕೂ ಕಾಂಗ್ರೆಸ್ ನಾಲಾಯಕ್ಕಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸನ್ನು ದೇಶದಲ್ಲಿ ಜನ ತಿರಸ್ಕರಿಸುತ್ತಿದ್ದಾರೆ. ಅವರದೇ ಪಕ್ಷ ಇದ್ದ ಪಂಜಾಬ್‌ನಲ್ಲೂ ಅಧಿಕಾರ ಕಳೆದುಕೊಂಡಿದೆ ಎಂದು ಟೀಕಿಸಿದರು.
ಪ್ರತಿಭಟಿಸುವ ಮುನ್ನ ಸಿದ್ದರಾಮಣ್ಣ ಯೋಚನೆ ಮಾಡಬೇಕಿತ್ತು. ಹಿಂದೆ ತುರ್ತು ಪರಿಸ್ಥಿತಿ ಹೇರಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದು ಅವರದೇ ಪಾರ್ಟಿ. ಇವತ್ತು ಇಡಿ ತನಿಖೆ ವಿರುದ್ಧ ಹೋರಾಟ ಸಿದ್ದರಾಮಯ್ಯನವರ ನಡವಳಿಕೆ ತೋರಿಸುತ್ತದೆ. ಕಾಂಗ್ರೆಸ್ ವಿರುದ್ಧ ಜನ ದಂಗೆ ಎದ್ದಾಗಿದೆ, ಸಿದ್ದರಾಮಯ್ಯನ ಪಾಠ ಕೇಳುವವರು ಯಾರೂ ಇಲ್ಲ ಎಂದು ಲೇವಡಿ ಮಾಡಿದರು.
ವಿಧಾನ ಪರಿಷತ್ ಚುನಾವಣೆಗಳು ಯಾವುದೇ ಚುನಾವಣೆಗೆ ದಿಕ್ಸೂಚಿಯಲ್ಲ. ಈ ಬಾರಿ ನಾಲ್ಕಕ್ಕೆ ಎರಡು ಸ್ಥಾನ ಪಡೆದಿದ್ದೇವೆ, ಹಿಂದೆಯೂ ಎರಡು ಸ್ಥಾನ ಇತ್ತು. ಅದನ್ನು ಈಗಲೂ ಉಳಿಸಿಕೊಂಡಿದ್ದೇವೆ. ನಮ್ಮ ಮತಗಳು ನಮಗೆ ಬಂದಿದೆ. ಜೊತೆಗೆ ಜೆಡಿಎಸ್ ಮತಗಳೂ ನಮ್ಮ ಕಡೆ ಬಂದಿದೆ ಎಂದು ಹೇಳಿದರು.