ಚಾಮರಾಜನಗರ: ಭಾರತ್ ಜೋಡೋ ಯಾತ್ರೆ ಮೂಲಕ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ದೇಶದಲ್ಲಿ ದ್ವೇಷ ಮತ್ತು ಸಮಾಜದ ನಡುವೆ ದಿಗಿಲು ಬಿತ್ತುತ್ತಿದ್ದಾರೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಲಕ್ಷ್ಮಣ್ ಅವರು ಆರೋಪಿಸಿದರು.
ಹನೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ವಿಶ್ವದ ಅತಿದೊಡ್ದ ಸಾಂಸ್ಕೃತಿಕ ಸಂಘಟನೆ ಆರ್ಎಸ್ಎಸ್ ವಿರುದ್ಧ ದ್ವೇಷ ಬಿತ್ತುತ್ತಿದ್ದು, ಈ ಮೂಲಕ ಸಮಾಜದಲ್ಲಿ ದಿಗಿಲು ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. 50 ಸಾವಿರ ರೂ. ಮೌಲ್ಯದ ಟಿ ಶರ್ಟ್ ಧರಿಸಿ ಶ್ರೀಸಾಮಾನ್ಯರಿಗೆ ಯಾವ ಸಂದೇಶ ಕೊಡುತ್ತಿದ್ದಾರೆ ಎಂದು ಟೀಕಿಸಿದರು.
ರಾಗಾ ನಾಯಕತ್ವದಿಂದ ಬೇಸತ್ತು ಎಲ್ಲರೂ ಪಕ್ಷ ಬಿಡುತ್ತಿದ್ದಾರೆ. ಎರಡು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಛತ್ತೀಸಗಢ ಮತ್ತು ರಾಜಾಸ್ಥಾನದಲ್ಲೂ ಬಿಜೆಪಿ ಅಧಿಕಾರಕ್ಕೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಲಕ್ಷ್ಮಣ್ ಅವರು ಮಾತನಾಡಿದರು ನಾವೇ ಅಧಿಕಾರಕ್ಕೆ ಬರಲಿದ್ದೇವೆ: ತೆಲಂಗಾಣ ಸಿಎಂ ಕೆಸಿಆರ್ ಮತ್ತು ನಿತೀಶ್ ಕುಮಾರ್ ಅವರು ವಿಪಕ್ಷ ನಾಯಕರನ್ನು ಒಗ್ಗೂಡಿಸುತ್ತಿರುವ ಕೆಲಸಕ್ಕೆ ಪ್ರತಿಕ್ರಿಯಿಸಿ, ಕುಟುಂಬ ರಾಜಕಾರಣಿಗಳು ಮತ್ತು ಭ್ರಷ್ಟಾಚಾರಿಗಳು ಒಂದೇ ವೇದಿಕೆಯಡಿ ಬರುತ್ತಿದ್ದಾರೆ. ಅವರ ಒಗ್ಗಟ್ಟಿಗೆ ಬಿಜೆಪಿ ಹೆದರುವುದಿಲ್ಲ. ಜನರ ಹೃದಯಗಳಲ್ಲಿ ಮೋದಿ ಇದ್ದಾರೆ. ತೆಲಂಗಾಣ ಸೇರಿದಂತೆ ಬಿಜೆಪಿ ಇಲ್ಲದ ಕಡೆಯೂ ಮುಂದೆ ನಾವೇ ಅಧಿಕಾರಕ್ಕೆ ಬರಲಿದ್ದೇವೆ ಎಂದರು.
ಆರೋಗ್ಯ ಶಿಬಿರ ಯಶಸ್ವಿ: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಹಿನ್ನೆಲೆ ಹನೂರು ಬಿಜೆಪಿ ಟಿಕೆಟ್ ಆಕಾಂಕ್ಷಿ ಜನಧ್ವನಿ ವೆಂಕಟೇಶ್ ಆಯೋಜಿಸಿದ್ದ ಆರೋಗ್ಯ ಶಿಬಿರ ಯಶಸ್ವಿಯಾಗಿದ್ದು, 7 ಸಾವಿರಕ್ಕೂ ಅಧಿಕ ಮಂದಿ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
ಅಲೋಪತಿ, ಹೋಮಿಯೋಪತಿ ಹಾಗೂ ಆಯುರ್ವೇದ ಎಲ್ಲಾ ರೀತಿಯ ತಪಾಸಣೆ, ಔಷಧ ವಿತರಣೆ ಮಾಡಲಾಯಿತು. ವಿಶೇಷ ಚೇತನರಿಗೆ ಲಕ್ಷ್ಮಣ್ ಗಾಲಿ ಕುರ್ಚಿ, ಸಾಧನ-ಸಲಕರಣೆ ವಿತರಿಸಿದರು.
ಓದಿ:ಹುಬ್ಬಳ್ಳಿಯಲ್ಲಿ ರಾಷ್ಟ್ರಪತಿಗೆ ಪೌರ ಸನ್ಮಾನ: ಮೇಯರ್ ಈರೇಶ ಅಂಚಟಗೇರಿ