ಚಾಮರಾಜನಗರ:ಚಾಮರಾಜನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಸ್ವಾಮಿ ಕಣಕ್ಕಿಳಿದಿದ್ದು (ಆಲೂರು ಮಲ್ಲು), ವಿ. ಸೋಮಣ್ಣ ಅವರಿಗೆ ಸಿಗುವ ಮತಗಳು ಕಡಿಮೆಯಾಗುವ ನಿರೀಕ್ಷೆ ಇದೆ. ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಜೊತೆ ಗುರುತಿಸಿಕೊಂಡಿದ್ದ ಆಲೂರು ಮಲ್ಲು, ಕಳೆದ ಬಾರಿ ಚಾಮರಾಜನಗರದ ಬಿಎಸ್ಪಿ ಅಭ್ಯರ್ಥಿಯಾಗಿ 7 ಸಾವಿರ ಮತ ಪಡೆದಿದ್ದರು. ಬಳಿಕ, ಮಹೇಶ್ ಹಿಂಬಾಲಿಸಿ ಬಿಜೆಪಿ ಸೇರಿದ್ದು ಕಳೆದ 5-6 ತಿಂಗಳುಗಳಿಂದ ವಿಜಯೇಂದ್ರ ಆಪ್ತ ರುದ್ರೇಶ್ ಅವರೊಂದಿಗೆ ಗುರುತಿಸಿಕೊಂಡಿದ್ದರು.
ಈಗ ದಿಢೀರ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಲಿಂಗಾಯತ ಪ್ರಾಬಲ್ಯದ ಚಾಮರಾಜನಗರ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ವಿಭಜನೆಯಾದಷ್ಟು ಕಾಂಗ್ರೆಸ್ಗೆ ವರವಾಗಲಿದ್ದು ಮಲ್ಲಿಕಾರ್ಜುನ ಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿರುವುದು ಬಿಜೆಪಿಗೆ ಮೈನಸ್ ಕಾಂಗ್ರೆಸ್ಗೆ ಪ್ಲಸ್ ಎಂಬ ಮಾತುಗಳಿವೆ.
ಇನ್ನೊಂದೆಡೆ ರೈತ ಸಂಘದ ಡಾ.ಗುರುಪ್ರಸಾದ್ ಎಎಪಿ ಅಭ್ಯರ್ಥಿ ಆಗಿದ್ದಾರೆ. ಇವರೂ ಕೂಡ ಸಾಕಷ್ಟು ಮತಗಳನ್ನು ಕೀಳುವ ಭರವಸೆ ಮೂಡಿಸಿದ್ದು, ಗುರುಪ್ರಸಾದ್ ಅವರು ಕೂಡ ಕೈ ಹಾಕುವುದು ಲಿಂಗಾಯತ ಮತಬುಟ್ಟಿಗೇ. ಆದ್ದರಿಂದ ಸೋಮಣ್ಣಗೆ ಇವರೂ ಕೂಡ ಹೊಡೆತ ಕೊಡಬಹುದು. ಸದ್ಯ, ಚಾಮರಾಜನಗರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಇದ್ದು ಉಳಿದ ಅಭ್ಯರ್ಥಿಗಳು ಕನ್ನ ಹಾಕುವ ಮತಗಳು ಒಬ್ಬ ಅಭ್ಯರ್ಥಿಯ ಸೋಲು ಅಥವಾ ಗೆಲುವಿಗೆ ಕಾರಣವಾಗಬಲ್ಲದು.