ಚಾಮರಾಜನಗರ:ಭಾಷಾ ಸಂಘರ್ಷ ದೇಶದ ಪ್ರಗತಿಗೆ ಮಾರಕ. ಇದು ದೇಶದ ಅಭಿವೃದ್ಧಿಗೆ ದೊಡ್ಡ ಪೆಟ್ಟು ಕೊಡಲಿದೆ. ಭಾರತ ವಿಶ್ವ ಗುರು ಸ್ಥಾನದತ್ತ ಹೋಗುತ್ತಿದೆ. ಆದರೆ, ದೇಶ ಕವಲುದಾರಿಯಲ್ಲಿ ಬಂದು ನಿಂತಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅಭಿಪ್ರಾಯಪಟ್ಟರು.
ಚಾಮರಾಜನಗರದ ಜೈನ ತೀರ್ಥಕ್ಷೇತ್ರ ಕನಕಗಿರಿಯಲ್ಲಿ ಅತಿಶಯ ಮಹೋತ್ಸವದಲ್ಲಿ ಭಾಗಿಯಾಗಿ ಮಾತನಾಡಿ, ಪಕ್ಕದಮನೆಯವರನ್ನು ಕಂಡು ಹೊಟ್ಟೆ ಉರಿ ಪಡುವಂತೆ ದೇಶದ ಪ್ರಗತಿಯಿಂದಾಗಿ ಕೆಲವರಿಗೆ ಹೊಟ್ಟೆಉರಿಯಾಗಿದೆ. ದೇಶದ ಓಟವನ್ನು ಹಿಂದಕ್ಕೆ ಎಳೆಯಲು ಕೆಲವು ಶಕ್ತಿಗಳು ಯತ್ನಿಸುತ್ತಿವೆ. ಏನಾದರೂ ಮಾಡಿ ದೇಶವನ್ನು ಹಾಳು ಮಾಡಬೇಕೆಂದು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
ಭಾಷೆಯ ವಿಷಯದಲ್ಲಿ ಸಂಘರ್ಷ ಉಂಟು ಮಾಡುವುದು, ಜಾತಿಗಳ ನಡುವೆ ಸಂಘರ್ಷ ಉಂಟು ಮಾಡುವುದು, ಭಾಷೆಗಳ ಒಳಗೇ ಸಂಘರ್ಷ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯಗಳ ನಡುವೆ ನೆಲ, ಜಲ ವಿಷಯದಲ್ಲಿ ಸಂಘರ್ಷ ಉಂಟು ಮಾಡುವ ದೊಡ್ಡ ದೊಡ್ಡ ಶಕ್ತಿಗಳು ನಮ್ಮ ನಡುವೆಯೇ ಇವೆ ಎಂದು ಅವರು ಇದೇ ವೇಳೆ ಯಾರ ಹೆಸರು, ಸಂಘಟನೆ, ಪಕ್ಷದ ಹೆಸರು ಹೇಳದೇ ಆರೋಪಿಸಿದರು.