ಚಾಮರಾಜನಗರ :ಕುಟುಂಬ ರಾಜಕಾರಣದಿಂದ ರಾಜ್ಯದಲ್ಲಿ ಜೆಡಿಎಸ್ ಮಾಯವಾಗಿದೆ. ಮೇಲ್ಮನೆ ಚುನಾವಣೆಯಲ್ಲಿ ನಮ್ಮ ಎದುರಾಳಿ ಕಾಂಗ್ರೆಸ್ ಮಾತ್ರ ಎಂದು ಕಂದಾಯ ಸಚಿಚ ಆರ್.ಅಶೋಕ್ ಹೇಳಿದರು.
ನಗರದಲ್ಲಿ ನಡೆದ ಬಿಜೆಪಿ ಜನಸ್ವರಾಜ್ ಸಮಾವೇಶ (BJP Janaswaraj Convention) ದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಸಮಾವೇಶ ಏಕೆ ಮಾಡುತ್ತಿದ್ದಾರೆಂದು ಹೆಚ್ಡಿಕೆ ಕೇಳಿದ್ದಾರೆ. ನಾವು ಸಮಾವೇಶ ಮಾಡಿದರೆ ಜನ ಬರುತ್ತಾರೆ ಅದಕ್ಕೆ ಮಾಡುತ್ತಿದ್ದೇವೆ. ನೀವು ಮಾಡಿದರೆ ಸಭೆ ಖಾಲಿ ಹೊಡೆಯಲಿದೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್‌ನ ಕೂಡ ಜನ ತಿರಸ್ಕರಿಸುತ್ತಿದ್ದಾರೆ :ಇಡೀ ದೇಶದಲ್ಲಿ ಕಾಂಗ್ರೆಸ್‌ನ ಕೂಡ ಜನ ತಿರಸ್ಕರಿಸುತ್ತಾ ಬರುತ್ತಿದ್ದಾರೆ. ನಾನು ಎಲ್ಲಾ ಭಾಗ್ಯಗಳನ್ನು ಕೊಟ್ಟೆ ಎಂದು ಸಿದ್ದರಾಮಯ್ಯ ಬೀಗುತ್ತಾರೆ. ಆದರೆ, ಜನಪರ ಆಡಳಿತ ಕೊಟ್ಡಿದ್ದರೇ ಜನ ಯಾಕೆ ತಿರಸ್ಕರಿಸುತ್ತಿದ್ದರು. ಅಲ್ಪಸಂಖ್ಯಾತರಿಗಾಗಿ ಶಾದಿ ಭಾಗ್ಯ, ಟಿಪ್ಪು ಜಯಂತಿ ಮಾಡಿದರು. ಬೇರೆ ವರ್ಗದ ಬಡವರು ಅವರ ಕಣ್ಣಿಗೆ ಕಾಣಲಿಲ್ಲವೇ ಎಂದು ಪ್ರಶ್ನಿಸಿದರು.
ಜನ ಮೆಚ್ಚುವಂತೆ ಸಿಎಂ ಬೊಮ್ಮಾಯಿ ಆಡಳಿತ :ಸರಳ, ಸಜ್ಜನಿಕೆಯಿಂದ ಜನ ಮೆಚ್ಚುವಂತೆ ಸಿಎಂ ಬೊಮ್ಮಾಯಿ ಆಡಳಿತ ನಡೆಸುತ್ತಿದ್ದಾರೆ. ಅಧಿಕಾರ ವಹಿಸಿಕೊಂಡ ದಿನದಿಂದಲೇ ಮುಖ್ಯಮಂತ್ರಿಗಳು ಝೀರೋ ಟ್ರಾಫಿಕ್ (Zero Traffic) ತಿರಸ್ಕರಿಸಿ ಜನಪರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಕೃಷಿ ಕಾಯ್ದೆ ಹಿಂಪಡೆದಿದ್ದು ಮೋದಿ ಅವರ ದೊಡ್ಡತನ :ಕೃಷಿ ಕಾಯ್ದೆ ಹಿಂಪಡೆದಿದ್ದು(Farm laws repeal) ಪ್ರಧಾನಿ ಮೋದಿ ಅವರ ದೊಡ್ಡತನ, ಒಂದು ವರ್ಗದ ರೈತರು ಒಪ್ಪದಿದ್ದಕ್ಕೇ ಕಾಳಜಿಯಿಂದ ಕೃಷಿ ಕಾಯ್ದೆ ವಾಪಸ್ ಪಡೆದಿದ್ದಾರೆ. ಆದರೆ, ಕೃಷಿ ಕಾಯ್ದೆ ಬಗ್ಗೆ ಹೋರಾಟವನ್ನೇ ಮಾಡದ ಕಾಂಗ್ರೆಸ್ ಪಕ್ಷದವರು ಗೆಜ್ಜೆ ಕಟ್ಟಿಕೊಂಡು ಕುಣಿಯುತ್ತಿದ್ದಾರೆ. ಅವರು ಪ್ರತಿಭಟನೆಗೆ ತೆರಳಿದ್ದಾಗ ರೈತರು ವಾಪಸ್ ಕಳುಹಿಸಿದ್ದರು. ಈಗ ತಾವೇ ವಾಪಸ್ ಪಡೆದವರಂತೆ ಬೀದಿಯಲ್ಲಿ ಕುಣಿತಿದ್ದಾರೆ ಎಂದರು.