ಚಾಮರಾಜನಗರದಲ್ಲಿ ವಾಟಾಳ್ ನಾಗರಾಜ್ ಮತಯಾಚನೆ. ಚಾಮರಾಜನಗರ : ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಚಾಮರಾಜನಗರದಲ್ಲಿ ಸೋಲಬೇಕು, ನಾನು ಗೆಲ್ಲಬೇಕು ಎಂದು ಚಾಮರಾಜನಗರ ವಿಧಾನಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವಾಟಾಳ್ ನಾಗರಾಜ್ ಹೇಳಿದರು. ವಿಭಿನ್ನ ಚಳವಳಿ ಮೂಲಕ ಗಮನ ಸೆಳೆಯುವ ಮೂಲಕ ವಾಟಾಳ್ ನಾಗರಾಜ್ ಮತಯಾಚನೆಯನ್ನೂ ಡಿಫರೆಂಟ್ ಆಗಿ ಇಂದು ಕ್ಷೇತ್ರದಲ್ಲಿ ಮಾಡಿದರು.
ನಗರದ ಮಾರಿಗುಡಿ ಬೀದಿಯಲ್ಲಿನ ಹಣ್ಣು ಮಾರಾಟಗಳ ಗಾಡಿಗಳಲ್ಲಿ ಕುಳಿತು ಮಾವು, ಸೇಬು, ಬಾಳೆ ಮಾರಾಟ ಮಾಡಿ ವಾಟಾಳ್ ನಾಗರಾಜ್ ಮತಬೇಟೆ ನಡೆಸಿದರು. ಮತ ಎಂಬುದು ಖರೀದಿ ಮಾಡಲು ಹಣ್ಣು, ತರಕಾರಿ ಅಲ್ಲ, ಜನರು ತಮ್ಮ ಮತವನ್ನು ಹಣಕ್ಕೆ, ಜಾತಿಗೆ ಮಾರಿಕೊಳ್ಳಬಾರದು. ಕಳೆದ 15 ವರ್ಷಗಳಿಂದ ಆಯ್ಕೆಯಾಗುತ್ತಿರುವ ಕೈ ಶಾಸಕ ಶಾಸನಸಭೆಯಲ್ಲಿ ಜಿಲ್ಲೆಯ ಬಗ್ಗೆ ಏನು ಮಾತನಾಡಿದ್ದಾರೆ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದರು. ಈ ವೇಳೆ ಗಲ್ಲಾದ ಮೇಲೆ ವಾಟಾಳ್ ಕುಳಿತಿದ್ದರಿಂದ ಜನರು ಭರ್ಜರಿಯಾಗಿಯೇ ವ್ಯಾಪಾರವನ್ನು ಮಾಡಿದರು. ಮತ ಹಾಕುವ ಭರವಸೆಯನ್ನು ಕೊಟ್ಟರು.
ಬಳಿಕ ಚಾಮರಾಜನಗರಕ್ಕೆ ರಾಹುಲ್ ಗಾಂಧಿ ಭೇಟಿ ನೀಡುವ ಕುರಿತು ವಾಟಾಳ್ ನಾಗರಾಜ್ ಮಾತನಾಡಿ, ಚಾಮರಾಜನಗರ ಜಿಲ್ಲೆ ಮಾಡಿದ್ದು ನಾನು, ರಾಹುಲ್ ಗಾಂಧಿ ಅಲ್ಲ. ರಸ್ತೆ ಮಾಡಿದ್ದು ನಾನು, ಕುಡಿಯುವ ನೀರು ಕೊಟ್ಟಿದ್ದು ನಾನು, ಬಿಜೆಪಿ-ಕಾಂಗ್ರೆಸ್ ನವರಲ್ಲ. ನೀರು ಕುಡಿಯುವ ಋಣಕ್ಕಾದರೂ ಜನರು ನನಗೊಂದು ಮತ ಕೊಡಬೇಕು. ನನ್ನನ್ನು ಸೋಲಿಸಿದರೇ ನನ್ನ ಹಾಗೂ ಚಾಮರಾಜನಗರ ಬಾಂಧವ್ಯ ಕೊನೆಯಾಗಲಿದೆ ಎಂದರು. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಬೇಕು, ನನ್ನನ್ನು ಗೆಲ್ಲಿಸಬೇಕು ಎಂದರು.
ಬಿಜೆಪಿ ಅಭ್ಯರ್ಥಿ ಸೋಮಣ್ಣನಿಗೆ ಲೋ ಬಿಪಿ :ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸತತವಾಗಿ ಸುತ್ತಾಡುತ್ತಿರುವ ಸಚಿವ ವಿ.ಸೋಮಣ್ಣ ಲೋ ಬಿಪಿಯಿಂದ ಬಳಲಿದ ಘಟನೆ ಇಂದು ಚಾಮರಾಜನಗರ ತಾಲೂಕಿನ ಕೋಡಿಮೋಳೆ ಗ್ರಾಮದಲ್ಲಿ ಪ್ರಚಾರದ ವೇಳೆ ನಡೆದಿದೆ. ಬರು ಬಿಸಿಲನಲ್ಲಿ ಸೋಮಣ್ಣ ಪ್ರಚಾರ ನಡೆಸುತ್ತಿರುವ ಹಿನ್ನೆಲೆಯಲ್ಲಿ ತಲೆ ಸುತ್ತಿ ಕಾರಿನಲ್ಲೇ 20 ನಿಮಿಷ ಕುಳಿತು ಸುಧಾರಿಸಿಕೊಂಡಿದ್ದಾರೆ. ಬಳಿಕ, ವೈದ್ಯರು ಚಿಕಿತ್ಸೆ ಕೊಟ್ಟ ಬಳಿಕ ಮತ್ತೆ ಸೋಮಣ್ಣ ಪ್ರಚಾರ ಆರಂಭಿಸಿದ್ದಾರೆ.
ಬಳಿಕ ಮಾತನಾಡಿದ ಅವರು, ನಾನು ಆರಾಮಾಗಿದ್ದೇನೆ, ಸ್ವಲ್ಪ ಲೋ ಬಿಪಿ ಇತ್ತು ಅಷ್ಟೇ, ಹೈ ಬಿಪಿಯಲ್ಲ, ನನ್ನಿಂದ ಬೇರೆಯವರಿಗೆ ಹೈಬಿಪಿ. ನಂಗೆ ತಲೆ ಸುತ್ತು ಬಂದಿರುವುದರಿಂದ ಹಾಗೇ ಕಾರಿನಲ್ಲಿ ಕುಳಿತು 20 ನಿಮಿಷ ರೆಸ್ಟ್ ಮಾಡಿದ್ದೇನೆ. ನಾನು ಸುಮ್ನೆ ಕುಳಿತುಕೊಳ್ಳುವವನು ಅಲ್ಲ. ನಿನ್ನೆ ಸಭೆ ಮುಗಿಸಿ ಮಲಗಿದಾಗ 4 ಗಂಟೆ ಆಗಿತ್ತು. ಹೀಗಾಗಿ ಸ್ವಲ್ಪ ದೈಹಿಕವಾಗಿ ಬಳಲಿದ್ದೇನೆ ಅಷ್ಟೇ ಎಂದು ಸೋಮಣ್ಣ ತಿಳಿಸಿದರು.
ಆಡಿಯೋ ವೈರಲ್ ಕೇಸ್ :ಜಿಡಿಎಸ್ ಅಭ್ಯರ್ಥಿಗೆ ನಾಮಪತ್ರ ತೆಗೆದುಕೊಳ್ಳವಂತೆ ಮಾತನಾಡಿದ ಆಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಇದೆಲ್ಲಾ ವ್ಯವಸ್ಥಿತ ಪಿತೂರಿ, ಚುನಾವಣೆ ಆಯೋಗ ಈಗಾಗಲೇ ಕ್ರಮ ತೆಗೆದುಕೊಂಡಿದೆ. ಚುನಾವಣೆ ಬಂದಾಗ ಇಂತಹದ್ದೆಲ್ಲಾ ಮಾಡುತ್ತಾರೆ. ಇದಕ್ಕೂ ನಗಗೂ ಸಂಬಂಧವಿಲ್ಲ. ತನಿಖೆ ಎದುರಿಸಲು ಸಿದ್ಧವಾಗಿದ್ದೇನೆ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಆಗುತ್ತಿರುತ್ತದೆ. ಹಾಗೇ ಪ್ರಭಾವಿಗಳ ಮೇಲೆ ಇಂತಹದ್ದೆಲ್ಲಾ ಇದ್ದಿದ್ದೇ ಎಂದು ಸೋಮಣ್ಣ ಸ್ಪಷ್ಟನೆ ಕೊಟ್ಟರು.
ಇದನ್ನೂ ಓದಿ :ಬಿಜೆಪಿ ಪ್ರಣಾಳಿಕೆ ಸುಳ್ಳಿನ ಕಂತೆ, ಹಿಂದಿನ ಭರವಸೆಗಳನ್ನೇ ಈಡೇರಿಸಿಲ್ಲ: ಕಾಂಗ್ರೆಸ್