ಚಾಮರಾಜನಗರ: ಜೇನು ಎಂದರೇ ಅದು ಸಿಹಿಯ ಪರ್ಯಾಯ ಪದವೇ ಆಗಿದೆ. ಸಕ್ಕರೆ, ಬೆಲ್ಲಕ್ಕೆ ಪರ್ಯಾಯವಾಗಿ ಸೇವಿಸುವುದು ನೋಡಿರುತ್ತೀರಿ, ಆದರೆ ಈ ಕಾಡಲ್ಲಿ ಕಹಿ ಜೇನು ಸಿಗುತ್ತದೆ.
ಅರೇ ಇದೇನಪ್ಪಾ ಜೇನಲ್ಲೂ ಕಹಿ ಉಂಟಾ ಎಂಬ ನಿಮ್ಮ ಪ್ರಶ್ನೆಗೆ ಹೌದು ಎಂಬುದೇ ಉತ್ತರ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ನೇರಳೆ ಹೂವು ಬಿಡುವ ಕಾಲದಲ್ಲಿ ಕಹಿ ಜೇನು ಸಿಗಲಿದೆ. ಸ್ವಲ್ಪ ಸಿಹಿ - ಹೆಚ್ಚು ತೊಗರಿನ ರುಚಿ ಕೊಡುವ ಜೇನುತುಪ್ಪ ಸೀಸನ್ ಬಂದಿದ್ದು ನೂರಾರು ಮಂದಿ ಕಹಿ ಜೇನನ್ನು ಸವಿಯುತ್ತಿದ್ದಾರೆ.
ನೇರಳೆ ಜೇನಿಗೆ ಬಲು ಬೇಡಿಕೆ: ಬಿಳಿಗಿರಿರಂಗನ ಬೆಟ್ಟದಲ್ಲಿ ಹೆಜ್ಜೇನು, ತುಡುವೆ, ಕೋಲು, ನೆಸರೆ ಹಾಗೂ ನೇರಳೆ ಎಂಬ 5 ತರಹದ ಜೇನು ಸಿಗಲಿದ್ದು ನೇರಳೆ ಹೂಗಳಿಂದ ಮಕರಂದ ಹೀರುವ ನೇರಳೆ ಜೇನು ಕಹಿರುಚಿ ಕೊಡುವುದು ವಿಶೇಷವಾಗಿದೆ. ನೇರಳೆ, ಕೋಲು, ನೆಸರೆ ಜೇನು ತುಪ್ಪ ಸಿಗುವುದು ಅತ್ಯಲ್ಪ. ಆದ್ದರಿಂದ ಅಡವಿ ನೇರಳೆ ಜೇನಿಗೆ ಬಲು ಬೇಡಿಕೆ ಇದೆ.