ಕರ್ನಾಟಕ

karnataka

ETV Bharat / state

ಗುಂಡ್ಲುಪೇಟೆಯಲ್ಲಿ ದಿಢೀರನೇ ಕೋಳಿಗಳು ಸಾವು: ಹಕ್ಕಿ ಜ್ವರದ ಭೀತಿ - ETV Bharath Karnataka

ಗುಂಡ್ಲುಪೇಟೆಯಲ್ಲಿ ಹಕ್ಕಿ ಜ್ವರ ಭೀತಿ - ಮುನ್ನೆಚ್ಚರಿಕಾ ಕ್ರಮವಾಗಿ ಕೇರಳದಿಂದ ಬರುವ ವಾಹನಗಳಿಗೆ ಹೈಪೋ ಕ್ಲೋರೈಡ್ ಸಿಂಪಡಣೆ - ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿಗೆ ಪಕ್ಷಿಯ ಅಂಗಾಂಗ ರವಾನೆ.

bird-flu-fear-in-chamarajanagar
ಹಕ್ಕಿ ಜ್ವರ ಕಾಲಿಟ್ಟ ಭೀತಿ

By

Published : Jan 16, 2023, 6:55 PM IST

ಚಾಮರಾಜನಗರ: ನೆರೆಯ ರಾಜ್ಯ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗುಂಡ್ಲುಪೇಟೆ ತಾಲೂಕಿನ ಗಡಿಭಾಗದಲ್ಲಿ ಪಶುಪಾಲನಾ ಇಲಾಖೆ ನಿಗಾವಹಿಸಿದ್ದರು ಸಹ ತಾಲ್ಲೂಕಿನ ಕಾಡಂಚಿನ ಗ್ರಾಮ ಮೇಲುಕಾಮನಹಳ್ಳಿ ಸುತ್ತಮುತ್ತಲಿನಲ್ಲಿ ಸಾಕು ಕೋಳಿಗಳು ಸಾಮೂಹಿಕವಾಗಿ ಮೃತವಾಗುತ್ತಿರುವುದರಿಂದ ಹಕ್ಕಿ ಜ್ವರ ಹರಡಿರಬಹುದು ಎಂಬ ಆತಂಕ ಎದುರಾಗಿದೆ.

ಗ್ರಾಮದಲ್ಲಿ ಅನೇಕರು ಮನೆಗಳಲ್ಲಿ ನಾಟಿ ತಳಿಯ ಕೋಳಿಗಳನ್ನು ಸಾಕಿ ಮಾರಾಟ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಹದಿನೈದು ದಿನಗಳಿಂದ ಕೋಳಿಗಳು ಆರೋಗ್ಯವಾಗಿದ್ದಂತೆ ಕಂಡು ಬಂದರೂ ಅಲ್ಲಲ್ಲಿ ಸಾಯುತ್ತಿದೆ. ಇದರಿಂದಾಗಿ ಗ್ರಾಮದಲ್ಲಿ ಸುಮಾರು ಈವರೆಗೆ ನೂರಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿದೆ. ಕೇರಳದಿಂದ ರಾಜ್ಯಕ್ಕೆ ರಾಷ್ಟ್ರೀಯ ಹೆದ್ದಾರಿ 766 ನಲ್ಲಿ ಬರುವಾಗ ಗಡಿಭಾಗ ಮೂಲೆಹೊಳೆ ಚೆಕ್​ಪೋಸ್ಟಿನಲ್ಲಿ ವಾಹನಗಳಿಗೆ ಸೋಡಿಯಂ ಹೈಪೋ ಕ್ಲೋರೈಡ್ ಸಿಂಪಡಣೆ ಮಾಡಲಾಗುತ್ತದೆ. ಆದರೆ, ರಾಷ್ಟ್ರೀಯ 212 ನಲ್ಲಿ ಕೆಕ್ಕನಹಳ್ಳ ಚೆಕ್​ಪೋಸ್ಟ್​​ ಕಡೆಯಿಂದ ಬರುವ ಕೇರಳದ ವಾಹನಗಳಿಗೆ ಯಾವುದೇ ತಪಾಸಣೆ ಇರದ ಆರೋಪವೂ ಕೇಳಿ ಬಂದಿದೆ‌‌.

ಗುಂಡ್ಲುಪೇಟೆ ತಾಲೂಕಿನ ಅನೇಕ ವಾಹನಗಳು ಕೇರಳದ ವಿವಿಧ ಭಾಗಗಳಿಗೆ ರಾಷ್ಟ್ರೀಯ ಹೆದ್ದಾರಿ 766 ನಲ್ಲಿ ಮತ್ತು 212ರಲ್ಲಿ ಸಂಚರಿಸುತ್ತವೆ. ಇದರಿಂದಾಗಿ ಸೋಂಕು ಹರಡಿರಬಹುದು ಎಂದು ಆತಂಕ ಎದುರಾಗಿದೆ. ಕೋಳಿಯ ಮೃತ ದೇಹವನ್ನು ಗುಂಡ್ಲುಪೇಟೆ ಪಟ್ಟಣದ ಪಶುಸಂಗೋಪನೆ ಇಲಾಖೆಗೆ ತಲುಪಿಸಿದ್ದಾರೆ. ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮೋಹನ್ ಕುಮಾರ್ ಅವರು ಮರಣೋತ್ತರ ಪರೀಕ್ಷೆ ನಡೆಸಿ ಅಂಗಾಂಗಗಳನ್ನು ಬೆಂಗಳೂರಿನ ಲ್ಯಾಬ್​ಗೆ ಕಳುಹಿಸಿದ್ದಾರೆ. ಈ ಸಂಬಂಧ ವರದಿ ಬಂದ ನಂತರ ಮಾಹಿತಿ ಸಿಗುತ್ತದೆ ಎಂದು ಡಾ.ಮೋಹನ್ ಕುಮಾರ್ ತಿಳಿಸಿದ್ದಾರೆ.

ಡಿಸೆಂಬರ್​ನಲ್ಲಿ ಕೇರಳದಲ್ಲಿ ಕಂಡು ಬಂದಿದ್ದ ಹಕ್ಕಿ ಜ್ವರ:ಡಿಸೆಂಬರ್​ ತಿಂಗಳಿನಲ್ಲಿ ಕೇರಳದ ಕೊಟ್ಟಾಯಂನ ವ್ಯಾಪ್ತಿಯ ವೇಚೂರು, ನೀಂದೂರ್ ಮತ್ತು ಅರ್ಪುಕರ ಪಂಚಾಯಿತಿಯಲ್ಲಿ​ ಹಕ್ಕಿ ಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ 6,000ಕ್ಕೂ ಹೆಚ್ಚು ಪಕ್ಷಿಗಳನ್ನು ಕೊಲ್ಲಲಾಗಿತ್ತು. ವೇಚೂರು ಗ್ರಾಮ ಪಂಚಾಯಿತಿಯಲ್ಲಿ 133 ಬಾತುಕೋಳಿಗಳು ಮತ್ತು 156 ಕೋಳಿಗಳು, ನೀಂದೂರು ಪಂಚಾಯಿತಿಯಲ್ಲಿ 2,753 ಬಾತುಕೋಳಿಗಳು ಮತ್ತು ಅರ್ಪುಕಾರದಲ್ಲಿ 2,975 ಬಾತುಕೋಳಿ ಸೇರಿ ಒಟ್ಟು 6,017 ಪಕ್ಷಿಗಳಿಗೆ ಜಿಲ್ಲಾಧಿಕಾರಿ ದಯಾಮರಣ ನೀಡಿದ್ದರು.

ಬಾತುಕೋಳಿಗಳು ಮತ್ತು ಕೋಳಿಗಳು ಸಾಮೂಹಿಕವಾಗಿ ಸಾವನ್ನಪ್ಪಿದ ನಂತರ ಭೋಪಾಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ ಲ್ಯಾಬ್​ನಲ್ಲಿ ಪರೀಕ್ಷೆ ನಡೆಸಿ ಎಚ್5ಎನ್1 ಸೋಂಕು ಇರುವುದು ದೃಢಪಟ್ಟಿತ್ತು. ಎಚ್5ಎನ್1 ಹಕ್ಕಿ ಜ್ವರ ವೇಚೂರು, ನೀಂದೂರು ಮತ್ತು ಅರ್ಪುಕರ ಪಂಚಾಯತ್‌ಗಳಲ್ಲಿ ಕಾಣಿಸಿಕೊಂಡಿದ್ದರಿಂದ ಆ ಪ್ರದೇಶದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಪಕ್ಷಿಗಳನ್ನು ದಯಾಮರಣ ಮಾಡಿ ಹೂಳಲಾಗಿತ್ತು.

ಮನುಷ್ಯರಿಗೆ ಹರಡುವುದಿಲ್ಲ:ಹಕ್ಕಿಗಳಲ್ಲಿ ಮೂರರಿಂದ ಐದು ದಿನಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಸಾಮೂಹಿಕವಾಗಿ ಪಕ್ಷಿಗಳ ಸಾವು ಸಂಭವಿಸುತ್ತದೆ. ಈ ವೈರಸ್‌ಗಳು ಸಾಮಾನ್ಯವಾಗಿ ಮನುಷ್ಯರಿಗೆ ಹರಡುವುದಿಲ್ಲ. ಆದರೂ ಅಲ್ಲಿನ ಜಿಲ್ಲಾಡಳಿತ ಮಾಂಸ ಮಾರಾಟವನ್ನು ನಿಷೇಧಿಸಿತ್ತು. ಆ ಸಮಯದಲ್ಲಿ ಕೊಟ್ಟಾಯಂನಿಂದ ಆಮದು ಮಾಡಿಕೊಳ್ಳುತ್ತಿದ್ದ ಕೋಳಿಗಳನ್ನು ಲಕ್ಷದ್ವೀಪ ಆಡಳಿತವು ನಿಷೇಧಿಸಿತ್ತು.

ಇದನ್ನೂ ಓದಿ:ಕೇರಳದಲ್ಲಿ ಹಕ್ಕಿ ಜ್ವರ ಭೀತಿ: ಕೊಟ್ಟಾಯಂನಲ್ಲಿ 6,000ಕ್ಕೂ ಹೆಚ್ಚು ಪಕ್ಷಿಗಳ ಹತ್ಯೆ

ABOUT THE AUTHOR

...view details