ಚಾಮರಾಜನಗರ :ರಾಜ್ಯದ ಪ್ರಮುಖ ಹಾಗೂ ಪೂರ್ವ- ಪಶ್ಚಿಮ ಘಟ್ಟಗಳ ಸಂಗಮ ಸೇತುವಾಗಿರುವ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ 274 ಪ್ರಬೇಧದ ಪಕ್ಷಿಗಳನ್ನು ಗುರುತು ಮಾಡಲಾಗಿದೆ. ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ 11 ವರ್ಷಗಳ ಬಳಿಕ ನಡೆದ ಪಕ್ಷಿ ಗಣತಿಯಲ್ಲಿ ಒಟ್ಟು 274 ಪ್ರಬೇಧದ ಪಕ್ಷಿಗಳನ್ನು ಗುರುತು ಮಾಡಿದ್ದು, ಇವುಗಳಲ್ಲಿ ಹೊಸದಾಗಿ ಎರಡು ಜಾತಿ ಹಕ್ಕಿಗಳು ಕಾಣಸಿಕ್ಕಿವೆ. ಬಹಳ ವರ್ಷಗಳ ಬಳಿಕ ಗ್ರೇಟ್ ಹಾರ್ನ್ ಬಿಲ್ ಕೂಡ ಅರಣ್ಯದಲ್ಲಿ ಗೋಚರಿಸಿದೆ.
1939ರಲ್ಲಿ ಪಕ್ಷಿ ಪ್ರೇಮಿ ಸಲೀಂ ಅಲಿ ಬಿಆರ್‌ಟಿ ಅರಣ್ಯಕ್ಕೆ ಆಗಮಿಸಿ ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ 139 ಪಕ್ಷಿಗಳನ್ನು ಗುರುತು ಮಾಡಿದ್ದರು. 2012ರಲ್ಲಿ ನಡೆದ ಪಕ್ಷಿ ಸಮೀಕ್ಷೆಯಲ್ಲಿ 272 ಪಕ್ಷಿಗಳು ಕಂಡುಬಂದಿದ್ದವು. ಅದಾದ ನಂತರ ಈಗ ನಾಲ್ಕು ದಿನಗಳ ಕಾಲ ನಡೆದ ಹಕ್ಕಿ ಗಣತಿಯಲ್ಲಿ 274 ಪಕ್ಷಿಗಳನ್ನು ಗುರುತು ಮಾಡಲಾಗಿದೆ.
ಗಣತಿ ಕಾರ್ಯ ಹೇಗೆ?:ಬಿಆರ್‌ಟಿ ಅಧಿಕಾರಿಗಳು ಇಕೋ ವಾಲೆಂಟಿಯರ್ಸ್ ಗ್ರೂಪ್ ಆಫ್ ಇಂಡಿಯಾದ ಸಹಕಾರದೊಂದಿಗೆ ಈ ಬಾರಿ ಪಕ್ಷಿ ಗಣತಿ ನಡೆದಿದ್ದು 50 ಸ್ವಯಂಸೇವಕರನ್ನು 25 ತಂಡಗಳಾಗಿ ಮಾಡಲಾಗಿತ್ತು. ಈ ತಂಡಗಳನ್ನು ಪರಿವರ್ತಿಸಿ 4 ದಿನಗಳ ಕಾಲ ಬೈನಾಕುಲರ್ ಮತ್ತು ಕ್ಯಾಮರಾದ ಸಹಾಯದಿಂದ ಪಕ್ಷಿಗಳನ್ನು ಕಂಡು ಚಿತ್ರ ಸೆರೆಹಿಡಿದು ವೈಜ್ಞಾನಿಕವಾಗಿ ಗಣತಿ ಕಾರ್ಯ ನಡೆಸಿದ್ದಾರೆ. ಪಕ್ಷಿ ಕಾಣಿಸಿಕೊಂಡ ಸ್ಥಳ ಮತ್ತು ಪರಿಸರವನ್ನು ದಾಖಲು ಮಾಡಲಾಗಿದೆ. ಮೊದಲಿಗೆ ಅರಣ್ಯ ಇಲಾಖೆಯ ಗೇಮ್ ರಸ್ತೆ ಹಾಗೂ ಮುಖ್ಯರಸ್ತೆಗಳಲ್ಲಿ ಸಮೀಕ್ಷೆ ಮಾಡಲಾಗಿತ್ತು. ನಂತರ, ನೀರು ಇರುವ ಕಡೆಗಳಲ್ಲಿ, ಕಾಡಿನೊಳಗೆ ಸಮೀಕ್ಷಾ ಕಾರ್ಯ ನಡೆಸಲಾಗಿದೆ.