ಬಿಳಿಕಲ್ಲು ಕ್ವಾರಿ ಕುಸಿದು ಅವಘಡ ಚಾಮರಾಜನಗರ: ಚಾಮರಾಜನಗರದಲ್ಲಿ ಎಗ್ಗಿಲ್ಲದೇ ಅಕ್ರಮ, ಅವೈಜ್ಞಾನಿಕ ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತೆ ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮದಲ್ಲಿ ಗುಡ್ಡ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಚಾಮರಾಜನಗರ ತಾಲೂಕಿನ ಕಾಗಲವಾಡಿಮೋಳೆ ಗ್ರಾಮದ ಸಿದ್ದರಾಜು, ಕುಮಾರ್ ಹಾಗೂ ಶಿವರಾಜ್ ಮೃತ ಕಾರ್ಮಿಕರು.
ಅಪಾಯಕಾರಿ ಮಟ್ಟದಲ್ಲಿ, ಅವೈಜ್ಞಾನಿಕವಾಗಿ ಗಣಿಗಾರಿಕೆ ನಡೆಸಿದ ಪರಿಣಾಮವೇ ಈ ಅವಘಡಕ್ಕೆ ಕಾರಣವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ನಂಜುಂಡಸ್ವಾಮಿ ತಿಳಿಸಿದ್ದಾರೆ.
ಇದನ್ನೂ ಓದಿ:ಮಡಹಳ್ಳಿ ಗುಡ್ಡ ಕುಸಿತ ಪ್ರಕರಣ: ಕ್ವಾರಿ ಮಾಲೀಕನ ಬಂಧನ, ಮತ್ತೋರ್ವನಿಗೆ ಶೋಧ
ಘಟನೆ ಆಗಿದ್ದು ಹೇಗೆ:ಗಣಿ ಇಲಾಖೆಯ ಪ್ರಕಾರ ಕ್ವಾರಿ ನಡೆಸಬೇಕಾದರೇ ಹಂತ-ಹಂತವಾಗಿ ಮಾಡಬೇಕು. ಜೊತೆಗೆ ಸ್ಫೋಟಕಗಳನ್ನು ಬಳಸಿದ್ದೇ ಆದಲ್ಲಿ ಇಲಾಖೆ ಅನುಮತಿ ಪಡೆದು ನುರಿತ ತಜ್ಞರಿಂದ ಸ್ಫೋಟಿಸಬೇಕು. ಆದರೆ, ಹಣ ಹೂಡಿಕೆ ಮಾಡಿ ಕಡಿಮೆ ಅವಧಿಯಲ್ಲೇ ಲಾಭ ಕಾಣಬೇಕೆಂಬ ದುರಾಸೆಯಿಂದ ಒಂದೇ ಕಡೇ ಆಳವಾಗಿ ಗಣಿಗಾರಿಕೆ ಮಾಡಿ ಸುರಕ್ಷಿತೆ ಮರೆತದ್ದು ಈ ದುರ್ಘಟನೆಗೆ ಕಾರಣವಾಗಿದೆ.
ಅಧಿಕಾರಿಗಳು ಹೇಳೋದೇನು:ಘಟನಾ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ನಂಜುಂಡಸ್ವಾಮಿ ಭೇಟಿ ನೀಡಿ ಮಾತನಾಡಿದರು. ಅವೈಜ್ಞಾನಿಕ, ಅಸುರಕ್ಷಿತೆಯ ಗಣಿಗಾರಿಕೆಯಿಂದ ಜೀವಹಾನಿಯಾಗಿದ್ದು, ಇದರ ಸಂಪೂರ್ಣ ಹೊಣೆ ಗುತ್ತಿಗೆದಾರರೇ ಆಗಿದ್ದಾರೆ. ಸಾಕಷ್ಟು ಬಾರಿ ನೋಟಿಸ್ ಕೊಟ್ಟು, ಸುರಕ್ಷಿತ ಗಣಿಗಾರಿಕೆ ನಡೆಸುವುದಾಗಿ ಕಾಗದದಲ್ಲಿ ಬರೆಸಿಕೊಂಡಿದ್ದರೂ ಅವೈಜ್ಞಾನಿಕ ಕಾರ್ಯ ಎಸಗಿದ್ದಾರೆ. ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಅವರು ತಿಳಿಸಿದ್ದಾರೆ.
ಗಣಿ ಮಾಲೀಕರ ಬಂಧನಕ್ಕೆ ಒತ್ತಾಯ: ಗಣಿ ದುರಂತದ ಸಂಬಂಧ ಚಾಮರಾಜನಗರ ಮಾಜಿ ಶಾಸಕ ಹಾಗೂ ಚಳವಳಿಗಾರ ವಾಟಾಳ್ ನಾಗರಾಜ್ ಪತ್ರಿಕಾ ಪ್ರಕಟಣೆ ಹೊರಡಿಸಿ, ಕೂಡಲೇ ಗಣಿ ಮಾಲೀಕರಾದ ರೇಣುಕಾದೇವಿ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಕರಿಕಲ್ಲು ಗಣಿಗಾರಿಕೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸುತ್ತಲೇ ಬಂದಿದ್ದೇನೆ. ಆದರೆ ಪೋಲಿಸ್ ಇಲಾಖೆ, ಗಣಿ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಕಳೆದ 15 ದಿನಗಳ ಹಿಂದೆ ಬಿಸಲವಾಡಿಯಲ್ಲಿ ಗಣಿಗಾರಿಕೆ ನಿಲ್ಲಿಸುವಂತೆ ಪ್ರತಿಭಟನೆಯನ್ನೂ ಮಾಡಿದ್ದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಗುಂಡ್ಲುಪೇಟೆ ಘಟನೆ:ಈ ಹಿಂದೆ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಸಮೀಪ ಕಳೆದ ಮಾರ್ಚ್ 5 ರಂದು ಬಿಳಿಕಲ್ಲು ಕ್ವಾರಿಯೊಂದು ಕುಸಿದು ಮೂವರು ಬಿಹಾರದ ಕಾರ್ಮಿಕರು ಮೃತಪಟ್ಟಿದ್ದರು. ಕಲ್ಲುಗಳ ನಡುವೆ ಸಿಲುಕಿಕೊಂಡಿದ್ದ ಅವರನ್ನು ಎನ್ಡಿಆರ್ಎಫ್ ತಂಡ 24 ತಾಸು ಕಾರ್ಯಾಚರಣೆ ನಡೆಸಿ ಶವಗಳನ್ನು ಮೇಲಕ್ಕೆತ್ತಿದ್ದರು. ಆ ದುರಂತಕ್ಕೂ ಅವೈಜ್ಞಾನಿಕ ಗಣಿಗಾರಿಕೆಯೇ ಕಾರಣವಾಗಿತ್ತು. ಹಂತಹಂತವಾಗಿ ಗಣಿಗಾರಿಕೆ ನಡೆಸದೇ ಒಂದೇ ಕಡೆ ಆಳಕ್ಕೆ ತೋಡಿ ಅಪಾಯ ಮೇಲೆಳೆದುಕೊಂಡಿದ್ದರು.
ಒಂದೆಡೆ ಗಣಿ ಲೂಟಿ ಮತ್ತೊಂದೆಡೆ ಮಾತು ಕೇಳದ ಗಣಿ ಮಾಲೀಕರು ಮತ್ತು ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ನಡುವೆ ಸಾಮಾನ್ಯರು ಬಲಿಯಾಗುತ್ತಿರುವುದು ವಿಪರ್ಯಾಸ. ಆದರೆ, ಸಾಕಷ್ಟು ಬಾರಿ ನೋಟಿಸ್, ಸಭೆಗಳನ್ನು ನಡೆಸಿದರೂ ಯಾವುದಕ್ಕೂ ಗಣಿ ಮಾಲೀಕರು ಬಗ್ಗುತ್ತಿಲ್ಲವೇ ಎಂಬ ಪ್ರಶ್ನೆಯೂ ಮೂಡಿದೆ.
(ಓದಿ: ಮಿಜೋರಾಂ ಕಲ್ಲು ಕ್ವಾರಿ ಕುಸಿತ: 8 ಮೃತದೇಹಗಳು ಪತ್ತೆ )