ಚಾಮರಾಜನಗರ:ವಿಪಕ್ಷಗಳನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ವಿಪಕ್ಷಗಳ ಅಭಿವ್ಯಕ್ತಿಯನ್ನೇ ಕಿತ್ತುಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.
ಗುಂಡ್ಲುಪೇಟೆಯಲ್ಲಿ ಭಾರತ್ ಜೋಡೋ ಯಾತ್ರೆಗೆ ಚಾಲನೆ ಕೊಟ್ಟು ಮಾತನಾಡಿದ ಅವರು, ಮಾಧ್ಯಮಗಳಲ್ಲಿ ನಮ್ಮ ಮಾತು ಪ್ರಸಾರವಾಗುತ್ತಿಲ್ಲ. ಮಾಧ್ಯಮಗಳು ಅವರ ಹಿಡಿತದಲ್ಲಿದೆ. ಸಂಸತ್ತು - ವಿಧಾನಸಭೆಗಳಲ್ಲಿ ಜನರ ಸಮಸ್ಯೆ ಮಾತನಾಡಿದರೇ ಮೈಕ್ ಆಫ್ ಆಗಲಿದೆ. ಎಲ್ಲ ಸಂಸ್ಥೆಗಳು ಅವರ ಹಿಡಿತದಲ್ಲಿದ್ದು, ವಿಪಕ್ಷಗಳ ಸ್ವಾತಂತ್ರ್ಯದ ಮಾರ್ಗ ಮುಚ್ಚಿ ಹಾಕುತ್ತಿದ್ದಾರೆ ಎಂದು ಬಿಜೆಪಿ ಹೆಸರು ಹೇಳದೇ ರಾಗಾ ಕಿಡಿಕಾರಿದರು.
ಸಂವಿಧಾನ ರಕ್ಷಣೆ, ಭಾರತದ ಧ್ವಜದ ರಕ್ಷಣೆಗಾಗಿ ಈ ಪಾದಯಾತ್ರೆ. ಜನರ ದುಃಖ- ದುಮ್ಮಾನಗಳನ್ನು ಕೇಳಲು ಜನರ ಬಳಿಗೆ ನಾವು ತೆರಳುತ್ತಿದ್ದೇವೆ. ಮಳೆ, ಬಿಸಿಲು ಏನೆ ಬಂದರೂ ಬೆಳಗ್ಗೆಯಿಂದ ಸಂಜೆವರೆಗೆ ನಡೆದಿದ್ದೇವೆ. ಲಕ್ಷಾಂತರ ಜನರು ಹುರುಪು ತುಂಬಿದ್ದು, ಯಾವ ಶಕ್ತಿಯೂ ಈ ಪಾದಯಾತ್ರೆ ನಿಲ್ಲಿಸಲಾಗಲ್ಲ ಎಂದು ಗುಡುಗಿದರು.
ನಮ್ಮ ಈ ಯಾತ್ರೆಯಲ್ಲಿ ದ್ವೇಷ, ಹಿಂಸೆ ಕಾಣಲ್ಲ. ಈ ಯಾತ್ರೆಯಲ್ಲಿ ಎಲ್ಲ ಧರ್ಮ, ಜಾತಿ ಜನರು ನಡೆಯುತ್ತಿದ್ದಾರೆ. ಈ ಪಾದಯಾತ್ರೆಯಲ್ಲಿ ಯಾರಿಗೇ ಏನೇ ತೊಂದರೆ ಆದರೂ ಮೊದಲು ಸಹಾಯ ಮಾಡುತ್ತಾರೆಯೇ ಹೊರತು ಜಾತಿ - ಭಾಷೆ ಕೇಳಲ್ಲ. ಇದು ನಮ್ಮ ಭಾರತ. ಈ ಭಾರತ ಉಳಿವಿಗಾಗಿ ಯಾತ್ರೆ ಎಂದು ಭಾರತ್ ಜೋಡೋದ ಮಹತ್ವ ತಿಳಿಸಿದರು.
ನಾನು ನಿತ್ಯ 6-7 ಗಂಟೆ ನಡೆಯುತ್ತೇನೆ. ನನ್ನೊಂದಿಗೆ ಲಕ್ಷಾಂತರ ಜನರು ಹೆಜ್ಜೆ ಹಾಕಿದ್ದಾರೆ. ಶ್ರೀಸಾಮಾನ್ಯರು ನಮ್ಮ ಬಳಿ ಬಂದು ಬೆಲೆ ಏರಿಕೆ, ರೈತರ ಮೇಲಾಗುತ್ತಿರುವ ದಬ್ಬಾಳಿಕೆ ಸೇರಿದಂತೆ ಅನೇಕ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಾರೆ. ನಾವು ಹೆಚ್ಚು ನಡೆಯುತ್ತಿದ್ದರಿಂದ ಜನರ ಅಭಿಪ್ರಾಯ ತಿಳಿದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಮತ್ತು ಕೊನೆಯಲ್ಲಿ ರಾಗಾ ರಾಗಾ ಎಂಬ ಘೋಷಣೆಗಳು ಮೊಳಗಿದವು, ಘೋಷಣೆಗಳು ಕೂಗುತ್ತಿದ್ದಂತೆ ಹರಿಪ್ರಸಾದ್ ಇನ್ನೂ ಕೂಗಿ ಎಂದು ಕೈ ಏರಿಸಿ ಉತ್ಸಾಹ ತುಂಬುತ್ತಿರುವುದು ಕಂಡು ಬಂದಿತು.
ಓದಿ:ಡಿಕೆಶಿಗೂ ಮುನ್ನ ಮಾರ್ಗ ಮಧ್ಯದಲ್ಲೇ ರಾಹುಲ್ಗೆ ಸ್ವಾಗತ ಕೋರಿದ ಸಿದ್ದರಾಮಯ್ಯ