ಕರ್ನಾಟಕ

karnataka

ETV Bharat / state

ಭರಚುಕ್ಕಿ ಜಲ ವೈಯ್ಯಾರ ಕಣ್ತುಂಬಿಕೊಂಡ ಪ್ರವಾಸಿಗರು: ನದಿಪಾತ್ರದ ಜನರಿಗೆ ಎಚ್ಚರಿಕೆ - kabini

ಕಬಿನಿ ಹಾಗೂ ಕೆ.ಆರ್.ಎಸ್ ಜಲಾಶಯಗಳು ಗರಿಷ್ಠಮಟ್ಟ ತಲುಪಿರುವ ಹಿನ್ನೆಲೆಯಲ್ಲಿ ನದಿಗಳಿಗೆ ಅಧಿಕ ಪ್ರಮಾಣದಲ್ಲಿ ನೀರು ಬಿಡುವ ಸಾಧ್ಯತೆಗಳಿದ್ದು, ಕೊಳ್ಳೇಗಾಲ ತಾಲೂಕು ವ್ಯಾಪ್ತಿಯ ಕಾವೇರಿ ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ.

ಭರಚುಕ್ಕಿ
ಭರಚುಕ್ಕಿ

By

Published : Oct 29, 2021, 11:47 AM IST

ಚಾಮರಾಜನಗರ: ನಿರಂತರ ಮಳೆ, ಕಬಿನಿ ಮತ್ತು ಕೆಆರ್​ಎಸ್ ಜಲಾಶಯದ ಹೊರಹರಿವು ಹೆಚ್ಚಿದ ಪರಿಣಾಮ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಭರಚುಕ್ಕಿ ಜಲಪಾತ ಭೋರ್ಗರೆದು ಧುಮ್ಮಿಕ್ಕುತ್ತಿದೆ‌.

ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ಭರಚುಕ್ಕಿಯ ವೈಭವ ರುದ್ರರಮಣೀಯವಾಗಿದ್ದು, ಜಲಧಾರೆಯನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ.‌ ಶಿವನ ಸಮುದ್ರದ ಸಮೂಹ ದೇವಾಲಯವನ್ನು ದಾಟುತ್ತಿದ್ದಂತೆ ಕಾವೇರಿಯ ನೋಟ ಅದ್ಭುತವಾಗಿದ್ದು, ವೆಸ್ಲಿ ಸೇತುವೆ ಬಳಿ ವಿಶಾಲವಾಗಿ ಹರಿಯುವ ನದಿಯ ಸೊಬಗು ಕಾಣುವುದೇ ಆನಂದ. ಮಳೆಯನ್ನು ಲೆಕ್ಕಿಸದೇ ಪ್ರವಾಸಿಗರು‌ ಜಿಲ್ಲೆಯ ವೀಕೆಂಡ್ ಸ್ಪಾಟ್​ಗಳಿಗೆ ಭೇಟಿ ನೀಡುತ್ತಿದ್ದು, ಪ್ರಕೃತಿ ಸೌಂದರ್ಯ ಸವಿಯುತ್ತಿದ್ದಾರೆ.

ಭರಚುಕ್ಕಿ ಜಲಪಾತಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರು

ನದಿಪಾತ್ರದ ಜನರಿಗೆ ಮನವಿ:

ಕಬಿನಿ ಹಾಗೂ ಕೆ.ಆರ್.ಎಸ್ ಜಲಾಶಯಗಳು ಗರಿಷ್ಠ ಮಟ್ಟ ತಲುಪುತ್ತಿವೆ. ಈ ಹಿನ್ನೆಲೆಯಲ್ಲಿ ನದಿಗಳಿಗೆ ಅಧಿಕ ಪ್ರಮಾಣದಲ್ಲಿ ನೀರು ಬಿಡುವ ಸಾಧ್ಯತೆಗಳಿದ್ದು ಕೊಳ್ಳೇಗಾಲ ತಾಲೂಕು ವ್ಯಾಪ್ತಿಯ ಕಾವೇರಿ ನದಿಪಾತ್ರದಲ್ಲಿ ಬರುವ ಮುಳ್ಳೂರು, ಹಳೆ ಹಂಪಾಪುರ, ದಾಸನಪುರ, ಹಳೆ ಅಣಗಳ್ಳಿ, ಹರಳೆ, ಸರಗೂರು, ಧನಗೆರೆ, ಎಡಕುರಿಯ, ಸತ್ತೇಗಾಲ ಮುಂತಾದ ನದಿಯ ದಂಡೆಗಳಲ್ಲಿರುವ ಗ್ರಾಮಗಳಲ್ಲಿ ಹಾಗೂ ನದಿಯ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಆಸ್ತಿ-ಪಾಸ್ತಿ ಹಾಗೂ ಜಾನುವಾರು ರಕ್ಷಣೆಗಾಗಿ ಸುರಕ್ಷಿತ ಸ್ಥಳಗಳಿಗೆ ತೆರಳಲು ಮುನ್ನೆಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ.

ನದಿ ಪಾತ್ರದಲ್ಲಿ ವಾಸಿಸುವ ಜನರು ನದಿಗಳಲ್ಲಿ ಬಟ್ಟೆ ತೊಳೆಯುವುದು, ಸ್ನಾನ ಮಾಡುವುದು, ಹಸು ಮೈ ತೊಳೆಯುವುದು, ಈಜುವುದು ಸೇರಿದಂತೆ ಇನ್ನಿತರೆ ಚಟುವಟಿಕೆಗಳನ್ನು ಮಾಡಬಾರದು. ಪ್ರವಾಹದಿಂದ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತೆ ವಹಿಸಲು ಗ್ರಾಮಗಳಿಗೆ ಆಗಮಿಸುವ ಅಧಿಕಾರಿ, ಸಿಬ್ಬಂದಿಗೆ ಗ್ರಾಮಸ್ಥರು ಸಹಕಾರ ನೀಡಬೇಕು. ನದಿ, ಜಲಪಾತ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ನದಿಗಳಿಗೆ ಇಳಿಯಬಾರದು ಎಂದು ತಿಳಿಸಲಾಗಿದೆ.

ABOUT THE AUTHOR

...view details