ಚಾಮರಾಜನಗರ: ನಿರಂತರ ಮಳೆ ಮತ್ತು, ಕಬಿನಿ ಜಲಾಶಯದ ಹೊರಹರಿವು ಹೆಚ್ಚಾದ ಪರಿಣಾಮ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಭರಚುಕ್ಕಿ ಜಲಪಾತ ಭೋರ್ಗರೆದು ಧುಮ್ಮಿಕ್ಕುತ್ತಿದ್ದು, ಜಿಲ್ಲೆಯ ಅರಣ್ಯ ಪ್ರದೇಶಗಳು ಮಂಜಿನಲ್ಲಿ ಮಿಂದೇಳುತ್ತಿವೆ.
ಹಾಲಿನ ನೊರೆಯಂತೆ ಧುಮ್ಮಿಕ್ಕುತ್ತಿರುವ ಭರಚುಕ್ಕಿಯ ವೈಭವ ರುದ್ರ ರಮಣೀಯವಾಗಿದೆ. ಈ ಜಲಧಾರೆಯನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಜನರು ಹಾಗೂ ಪ್ರವಾಸಿಗರು ಧಾವಿಸುತ್ತಿದ್ದಾರೆ. ಹಾಲ್ನೊರೆಯ ನೀರನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿದ್ದು, ಹಳೇ ಮೈಸೂರು ಭಾಗದಲ್ಲಾಗುತ್ತಿರುವ ಸತತ ಮಳೆ ಮತ್ತು ಕಬಿನಿ ಹೊರ ಹರಿವಿನಿಂದಾಗಿ ಗಗನಚುಕ್ಕಿ- ಭರಚುಕ್ಕಿ ಜಲಪಾತಗಳಲ್ಲಿ ಜಲ ವೈಯ್ಯಾರ ಸೃಷ್ಟಿಯಾಗಿದೆ.