ಚಾಮರಾಜನಗರ: ರಾಜ್ಯದ ಪ್ರಮುಖ ದೇಗುಲಗಳಲ್ಲೊಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ದೇಗುಲದಲ್ಲಿ ಇಂದಿನಿಂದ ಆನ್‌ಲೈನ್ ದರ್ಶನ ಸೇವೆ ಆರಂಭವಾಗಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧ ಇರುವುದರಿಂದ ಪ್ರಾಧಿಕಾರದ ವೆಬ್ಸೈಟ್ www.mmhillstemple.comನಲ್ಲಿ ಬೆಳಗ್ಗೆ 4 ರಿಂದ 5.30 ರವರೆಗೆ ಹಾಗೂ ಸಂಜೆ 6.45 ರಿಂದ 8 ರವರೆಗೆ ನಡೆಯುವ ಅಭಿಷೇಕವನ್ನು ಭಕ್ತರು ಆನ್‌ಲೈನ್ ಮೂಲಕ ಕಣ್ತುಂಬಿಕೊಳ್ಳಬಹುದಾಗಿದೆ.
ಆನ್‌ಲೈನ್ ಮೂಲಕವೇ ಭಕ್ತರು ಸೇವೆಯನ್ನು ಕಾಯ್ದಿರಿಸಿ ತಮ್ಮ ತಮ್ಮ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಬಹುದಾಗಿದ್ದು, ರಾಜ್ಯದೊಳಗಿನ ಭಕ್ತಾದಿಗಳಿಗೆ ಅಂಚೆ ಮೂಲಕ ಬಿಲ್ವಪತ್ರೆ, ವಿಭೂತಿ, ಒಣದ್ರಾಕ್ಷಿಯನ್ನು ಕಳುಹಿಸಿಕೊಡಲಾಗುವುದು ಎಂದು ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಮಾಹಿತಿ ನೀಡಿದ್ದಾರೆ.
ಆನ್ಲೈನ್ನಲ್ಲಿ ಮಾದಪ್ಪನ ದರ್ಶನ ಆರಂಭ. ಸೇವಾ ವಿವರ:ಪಂಚ ಕಳಸ ಸಮೇತ ನವರತ್ನ ಕಿರೀಟ ಧಾರಣೆಗೆ 600 ರೂ., ಏಕದಶವಾರ ರುದ್ರಾಭಿಷೇಕ, ನವರತ್ನ ಕಿರೀಟ ಧಾರಣೆಗೆ 750 ರೂ., ರುದ್ರಾಭಿಷೇಕಕ್ಕೆ 300 ರೂ., ಅಷ್ಟೋತ್ತರ ಬಿಲ್ವಾರ್ಚನೆ 300 ರೂ., ಪಂಚಾಮೃತ ಅಭಿಷೇಕ 300 ರೂ., 1 ತಾಸು ವಿದ್ಯುತ್ ದೀಪಾಲಂಕಾರಕ್ಕೆ 1200 ರೂ., ಅರ್ಧ ತಾಸಿಗೆ 750, ಕಾಲು ತಾಸಿಗೆ 500 ರೂ., ಹುಲಿ ವಾಹನ, ಬೆಳ್ಳಿ ವಾಹನ, ಬಸವ ವಾಹನ ಸೇವೆಗೆ 200 ರೂ. ನಿಗದಿ ಪಡಿಸಲಾಗಿದೆ.
ಇನ್ನು, ಕೋವಿಡ್-19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಮಹಾರುದ್ರಾಭಿಷೇಕ, ರುದ್ರತ್ರಿಶತಿ, ನಾಮಕರಣ, ಲಾಡು ಸೇವೆ, ಕಜ್ಜಾಯ ಸೇವೆ, ಬಂಗಾರದ ರಥೋತ್ಸವ, ಸಂಕಷ್ಟಹರ ಚತುರ್ಥಿ, ಉರೊಟ್ಟಿನ ಸೇವೆ, ಅನ್ನ ಬ್ರಹ್ಮೋತ್ಸವ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.