ಚಾಮರಾಜನಗರ:ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ ಅವರು ಕೃಷಿಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವುದು ವಿಷಯ ಗೊತ್ತಿರುವಂಥದ್ದೇ. ಇದರ ಜೊತೆಗೆ ಅವರು ಬೀದಿನಾಯಿಗಳ ಮೇಲೂ ವಿಶೇಷ ಅಕ್ಕರೆ ಹೊಂದಿದ್ದು, ಆಹಾರ, ಔಷಧ ನೀಡುವ ಮೂಲಕ ಪ್ರಾಣಿ ಪ್ರೀತಿ ಮೆರೆಯುತ್ತಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಜಮೀನು ಖರೀದಿಸಿ ಕೃಷಿ ನಡೆಸುತ್ತಿರುವ ಬಿನ್ನಿ, ತಾವು ಇಲ್ಲಿಗೆ ಬಂದಾಗಲೆಲ್ಲ ಬೀದಿನಾಯಿಗಳಿಗೆ ಆಹಾರ ನೀಡುವರು. ಕೆಲ ದಿನಗಳ ಹಿಂದಷ್ಟೇ, ಬೀದಿನಾಯಿಗಳಿಗೆ ಚುಚ್ಚುಮದ್ದು ಹಾಕಿಸಿದ್ದರು. ತಾವು ಕೃಷಿ ಭೂಮಿಗೆ ತೆರಳುವ ಮಾರ್ಗಮಧ್ಯೆ ಸಿಗುವ ಬೀದಿನಾಯಿಗಳಿಗೆ ಆಹಾರ ನೀಡುತ್ತಾ ಸಾಗುವ ಬಿನ್ನಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.