ಚಾಮರಾಜನಗರ: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಮಾಡಿದವರನ್ನು ಗಲ್ಲಿಗೇರಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ದಾರೆ.
ಮಲೆಮಹದೇಶ್ವರ ಬೆಟ್ಟದಲ್ಲಿ ಪಂಚಮಸಾಲಿಗಳಿಗೆ 2-ಎ ಮೀಸಲಾತಿಗೆ ಆಗ್ರಹಿಸಿ ಇಂದಿನಿಂದ ಆರಂಭಗೊಂಡ ಪಾದಯಾತ್ರೆಯಲ್ಲಿ ಅವರು ಮಾತನಾಡಿದರು. ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಯಾವುದೇ ಕಾರಣಕ್ಕೂ ಜಾಮೀನು ಸಿಗಬಾರದು. ಆರೋಪಿಗಳನೇದಾರೂ ಪರಾರಿಯಾಗಲು ಪ್ರಯತ್ನಿಸಿದರೆ ಎನ್ಕೌಂಟರ್ ಮಾಡಲಿ ಎಂದು ಆಕ್ರೋಶ ಹೊರಹಾಕಿದರು.
ಇದೇ ವೇಳೆ ಡಿ.ಕೆ ಶಿವಕುಮಾರ್ ತಮ್ಮನ್ನು ಹುಚ್ಚ ಎಂದು ಕರೆದಿರುವ ಕುರಿತು ಪ್ರತಿಕ್ರಿಯಿಸಿದರು. ಆತನೊಬ್ಬ ಕಳ್ಳ, ನಾನೊಬ್ಬ ದೇಶಭಕ್ತದ ಹುಚ್ಚ, ಹಿಂದುತ್ವದ ಹುಚ್ಚ, ನಾನು ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆದು ರಾಜಕಾರಣ ಮಾಡಿದವನಲ್ಲ ಎಂದು ತಿರುಗೇಟು ನೀಡಿದರು.
ಹೊಂದಾಣಿಕೆ ರಾಜಕಾರಣ ಮಾಡುವವರು ನನ್ನ ವಿರುದ್ಧ ಟೀಕೆ ಮಾಡುತ್ತಾರೆ. ಹರಿಪ್ರಸಾದ್ ಹಾಗೂ ಧ್ರುವನಾರಾಯಣ್ ನಮ್ಮ ಪಕ್ಷದ ವಿರುದ್ಧ ಮಾತನಾಡಿದ್ದಾರೆ. ಅವರಿಗೆಲ್ಲ ನಾನು ಕಠಿಣವಾಗಿ ಉತ್ತರ ಕೊಡುತ್ತೇನೆ. ರಾಹುಲ್ ಗಾಂಧಿ ಹುಚ್ಚ ಎಂಬ ಹೇಳಿಕೆಯನ್ನು ಈಗಲೂ ಸಮರ್ಥಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.
ಗಟ್ಟಿತನ ಕೈಗೊಳ್ಳಲಿ: ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು. ಭಾರತಕ್ಕೆ ಭಾರತ ಮಾತೆ, ಕರ್ನಾಟಕಕ್ಕೆ ಕನ್ನಡಮ್ಮ ಅಂತೀವಿ. ಅಷ್ಟರ ಮಟ್ಟಿಗೆ ನಾವು ಗೌರವ ಕೊಡ್ತೀವಿ. ಚಿಕ್ಕಮಕ್ಕಳು, ಯುವತಿಯ ಮೇಲೆ ಗ್ಯಾಂಗ್ ರೇಪ್ ಆಗಿರೋದು ನೋವಾಗಿದೆ. ಮೈಸೂರಲ್ಲಿ, ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದಿರೋದು ಬೇಸರದ ಸಂಗತಿ. ಇದೀಗ ನಿರ್ಭಯಾ ಪ್ರಕರಣದಲ್ಲಿ ಕೈಗೊಂಡ ಗಟ್ಟಿತನದ ತೀರ್ಮಾನ ಕೈಗೊಳ್ಳಲಿ ಎಂದು ಒತ್ತಾಯಿಸಿದರು.
ಪಾದಯಾತ್ರೆ ಆರಂಭ: ಪಂಚಮಸಾಲಿಗಳಿಗೆ 2-ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಿಂದ ಪ್ರತಿಜ್ಞಾ ಪಂಚಾಯತ್ ಅಭಿಯಾನ ಎಂಬ ಪಾದಯಾತ್ರೆ ಆರಂಭಗೊಂಡಿದೆ. ಮೀಸಲಾತಿ ಬೇಡಿಕೆ ಈಡೇರದಿದ್ದರೆ ಅ.1 ರಿಂದ ಧರಣಿ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಓದಿ:ಎರಡು ದಿನಗಳ ದೆಹಲಿ ಪ್ರವಾಸ ಮುಗಿಸಿ ಇಂದು ರಾತ್ರಿ ಬೆಂಗಳೂರಿಗೆ ಸಿಎಂ ವಾಪಸ್