ಕರ್ನಾಟಕ

karnataka

ETV Bharat / state

'ರಾಣಾ'ನಿಗೆ ಸರ್ಕಾರಿ ಗೌರವದೊಂದಿಗೆ ಅಂತಿಮ ವಿದಾಯ: ಪತ್ತೆ ಕಾರ್ಯದಲ್ಲಿ ಪ್ರಚಂಡ ಅರಣ್ಯ ಇಲಾಖೆಯ ಈ ಶ್ವಾನ!

ಶ್ವಾನ 'ರಾಣಾ' ತನ್ನ ಏಳು ವರ್ಷಗಳ ಸೇವಾವಧಿಯಲ್ಲಿ 8 ಹುಲಿ ಸಂಬಂಧಿತ ಪ್ರಕರಣಗಳು, 45ಕ್ಕೂ ಹೆಚ್ಚು ಚಿರತೆ ಸಂಬಂಧಿತ ಪ್ರಕರಣಗಳು, ಹಲವು ಮರಗಳ್ಳತನ ಪ್ರಕರಣಗಳು, ಉರುಳು ಪತ್ತೆ ಕಾರ್ಯಗಳಲ್ಲಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವುದಲ್ಲದೇ ದೈನಂದಿನ ಅರಣ್ಯ ಮತ್ತು ವನ್ಯಪ್ರಾಣಿ ಸಂರಕ್ಷಣೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತನ್ನದೇ ಆದ ಛಾಪು ಮೂಡಿಸಿ ಅಭಿಮಾನಿ ವಲಯವನ್ನೇ ಸೃಷ್ಟಿಸಿಕೊಂಡಿತ್ತು.

Bandipur hunter dog Rana's funeral with state honor
ರಾಣಾನಿಗೆ ಸರ್ಕಾರಿ ಸಕಲ ಗೌರವ

By

Published : Aug 2, 2022, 7:43 PM IST

Updated : Aug 2, 2022, 7:58 PM IST

ಚಾಮರಾಜನಗರ:ಕಳೆದ 7 ವರ್ಷಗಳಿಂದ ತನ್ನ ವಿಶೇಷ ಚಾಕಚಕ್ಯತೆ ಮತ್ತು ಗ್ರಹಿಸುವ ಶಕ್ತಿಯಿಂದ ಕಾಡುಗಳ್ಳರ ನಿದ್ರೆ ಕದ್ದಿದ್ದ ಸುಮಾರು 10 ವರ್ಷದ ಜರ್ಮನ್ ಶೆಫರ್ಡ್ ತಳಿಯ ಶ್ವಾನ ಸೋಮವಾರ ರಾತ್ರಿ ಅಸುನೀಗಿತ್ತು. ಅರಣ್ಯ ಇಲಾಖೆಯಲ್ಲಿ ಕರ್ನಾಟಕಕ್ಕೆ ಸೇರ್ಪಡೆಗೊಂಡ ಮೊದಲ ಶ್ವಾನ ಇದಾಗಿದ್ದು, ಇಲಾಖೆಯ ನೌಕರನಾಗಿಯೇ ಬಂಡೀಪುರದಲ್ಲಿ ಬೆಳೆದಿತ್ತು.

ರಾಣಾನಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ವಿದಾಯ

'ಬಂಡೀಪುರ ರಾಣಾ'ನ ಸಾಧನೆ:ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಕಳ್ಳ ಬೇಟೆ, ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು, ವನ್ಯಜೀವಿ ಬೇಟೆಗಾರರನ್ನು ನಿಗ್ರಹಿಸಲು ಮತ್ತು ಅರಣ್ಯ ಮೊಕದ್ದಮೆಗಳನ್ನು ಭೇದಿಸುವುದಕ್ಕಾಗಿ ನೇಮಕವಾಗಿತ್ತು. 'ರಾಣಾ' 28-12-2013 ರಂದು ಜನಿಸಿದ್ದು ಜರ್ಮನ್ ಶೆಫರ್ಡ್ ತಳಿಯಾಗಿದೆ. 'ರಾಣಾ'ವು ಭೂಪಾಲ್‍ನ ವಿಶೇಷ ಸಶಸ್ತ್ರ ಪಡೆಗಳ 28ನೇ ಬೆಟಾಲಿಯನ್‍ನಲ್ಲಿ ತರಬೇತಿಯ ಪಡೆದು ಬಂಡೀಪುರದಲ್ಲಿ ಕರ್ತವ್ಯಕ್ಕೆ ಹಾಜರಾಗಿತ್ತು.

ಕರ್ತವ್ಯದ ಪ್ರಾರಂಭದಲ್ಲಿಯೇ ಎನ್.ಬೇಗೂರು ವಲಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ತೇಗದ ಮರ ಕಡಿದ ಮೂವರನ್ನು ಪತ್ತೆ ಹಚ್ಚುವಲ್ಲಿ ಸಹಾಯ ಮಾಡಿತ್ತು. ಬಳಿಕ ಓಂಕಾರ ವಲಯದ ವ್ಯಾಪ್ತಿಯಲ್ಲಿ ಚಿರತೆಗಳ ವಿಷ ಪ್ರಾಶನ ಪ್ರಕರಣ, ಮೈಸೂರು ವಿಭಾಗದ ವ್ಯಾಪ್ತಿಗೆ ಬರುವ ಶ್ರೀರಂಗಪಟ್ಟಣದಲ್ಲಿ ಶ್ರೀಗಂಧ ಕಳ್ಳರ ಪತ್ತೆಹಚ್ಚುವಿಕೆ ಪ್ರಕರಣ ಭೇದಿಸಿತ್ತು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವಲ್ಲದೇ ರಾಜ್ಯದ ವಿವಿಧ ಅರಣ್ಯ ವಿಭಾಗಗಳ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಹುಲಿ, ಚಿರತೆಯಂತಹ ಪ್ರಾಣಿಗಳ ಸ್ಥಳಗಳನ್ನು ಗುರುತು ಮಾಡಿಕೊಟ್ಟು ಸೆರೆ ಹಿಡಿಯುವ ಕಾರ್ಯಾಚರಣೆಗಳಿಗೆ ಯಶಸ್ಸು ತಂದುಕೊಟ್ಟಿತ್ತು ಈ ಶ್ವಾನ. ವಿಶೇಷವಾಗಿ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಗುಡಲೂರಿನಲ್ಲಿ 8 ತಿಂಗಳುಗಳವರೆಗೆ ಉಪಟಳ ನೀಡುತ್ತಿದ್ದ ನರಭಕ್ಷಕ ಹುಲಿಯನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ರಾಣಾನ ಕೊಡುಗೆ ಅನನ್ಯ.

ರಾಣಾ ತನ್ನ ಏಳು ವರ್ಷಗಳ ಸೇವಾವಧಿಯಲ್ಲಿ 8 ಹುಲಿ ಸಂಬಂಧಿತ ಪ್ರಕರಣಗಳು, 45ಕ್ಕೂ ಹೆಚ್ಚು ಚಿರತೆ ಸಂಬಂಧಿತ ಪ್ರಕರಣಗಳು, ಹಲವಾರು ಮರಗಳ್ಳತನ ಪ್ರಕರಣಗಳು, ಉರುಳು ಪತ್ತೆ ಕಾರ್ಯಗಳಲ್ಲಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವುದಲ್ಲದೇ ದೈನಂದಿನ ಅರಣ್ಯ ಮತ್ತು ವನ್ಯಪ್ರಾಣಿ ಸಂರಕ್ಷಣೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತನ್ನದೇ ಆದ ಛಾಪು ಮೂಡಿಸಿ ಅಭಿಮಾನಿ ವಲಯವನ್ನೇ ಸೃಷ್ಟಿಸಿಕೊಂಡಿತ್ತು.

ರಾಣಾನ ಆಪರೇಷನ್ ಪಟ್ಟಿ ಹೀಗಿದೆ..:

  • 09-03-2016ರಂದು ಎನ್. ಬೇಗೂರು ವಲಯದಲ್ಲಿ ಅಕ್ರಮವಾಗಿ ತೇಗದ ಮರಗಳನ್ನು ಕಡಿದ ಕಾಡುಗಳ್ಳರ ಜಾಡು ಪತ್ತೆ.
  • ತಮಿಳುನಾಡಿನ ಗೂಡಲೂರು ಪ್ರದೇಶದಲ್ಲಿ ನರಭಕ್ಷಕ ಹುಲಿಯ ಜಾಡನ್ನು ಹಿಡಿದುಕೊಟ್ಟು ಹುಲಿ ನಿಗ್ರಹಕ್ಕೆ ಸಹಾಯ.
  • 24-07-2016ರಂದು ಓಂಕಾರ ವಲಯದಲ್ಲಿ 2 ಚಿರತೆಗಳಿಗೆ ವಿಷಪ್ರಾಶನ ಮಾಡಿದ ಹಿನ್ನೆಲೆಯಲ್ಲಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಪತ್ತೆಹಚ್ಚಿದ್ದು.
  • 14-03-2017ರಂದು ಶ್ರೀರಂಗಪಟ್ಟಣದ ವಲಯ ಕಚೇರಿ ಆವರಣದಲ್ಲಿ ಅಕ್ರಮವಾಗಿ ಕಡಿದು ಮುಚ್ಚಿಟ್ಟಿದ್ದ ಗಂಧದ ತುಂಡುಗಳನ್ನು ಪತ್ತೆ ಹಚ್ಚಿದ್ದು.
  • 20-04-2017ರಂದು ಪ್ರಿನ್ಸ್ ಎಂದು ಖ್ಯಾತಿ ಪಡೆದಿದ್ದ ಹುಲಿಯ ಅನುಮಾನಾಸ್ಪದಸಾವಿಗೆ ಸಂಬಂಧಿಸಿದ ಪ್ರಕರಣ ಬೇಧಿಸಿದ್ದು.
  • 07-07-2018ರಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿ.ಬಿ. ಕುಪ್ಪೆ ವಲಯದ ವ್ಯಾಪ್ತಿಯಲ್ಲಿ ಜಿಂಕೆ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ ಅನುಮಾನಾಸ್ಪದ ವ್ಯಕ್ತಿಗಳನ್ನು ಪತ್ತೆಹಚ್ಚಿರುವುದು.
  • 25-09-2018ರಂದು ಮೈಸೂರು ವಿಭಾಗದ ಹಾರೋಹಳ್ಳಿ ಗ್ರಾಮದಲ್ಲಿ ಅಕ್ರಮ ವಿದ್ಯುತ್ ಸಂಪರ್ಕದಿಂದಾಗಿ ಮೃತಪಟ್ಟಿದ್ದ ಹುಲಿಯನ್ನು ಕಾಡಿನ ಬಳಿ ಎಸೆದು ಹೋಗಿದ್ದ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿರುವುದು.
  • 21-11-2018ರಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಂತರ ಸಂತೆ ವಲಯದ ವ್ಯಾಪ್ತಿಯಲ್ಲಿ ಕಬಿನಿ ಹಿನ್ನೀರು ಪ್ರದೇಶದಲ್ಲಿ ಬೋಟ್‍ನ ಇಂಜಿನನ್ನು ಅಪಹರಿಸಿದ್ದ ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯಾಚರಣೆಯಲ್ಲಿ ಭಾಗಿ.
  • 22-11-2018ರಂದು ಜಿ.ಎಸ್. ಬೆಟ್ಟ ವಲಯ ವ್ಯಾಪ್ತಿಯಲ್ಲಿ ಹಿರೀಕೆರೆ ಅರಣ್ಯ ಪ್ರದೇಶದಲ್ಲಿ ಮೃತಪಟ್ಟಿದ್ದ ಹುಲಿಯನ್ನು ಪತ್ತೆಹಚ್ಚಿರುವುದು.
  • 11-12-2018ರಂದು ಹುಣಸೂರು ವಲಯ ವ್ಯಾಪ್ತಿಯಲ್ಲಿ ಹುಲಿ ಸಾವಿನ ಪ್ರಕರಣವನ್ನು ಪತ್ತೆಹಚ್ಚಿರುವುದು.
  • 11.29-05-2019ರಂದು ಗುಂಡ್ಲುಪೇಟೆ ಬಫರ್ ವಲಯದ ಪಾರ್ವತಿ ಬೆಟ್ಟ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಹುಲಿ ಮತ್ತು ಚಿರತೆಗಳು ವಿಷ ಪ್ರಾಶನ ಪ್ರಕರಣವನ್ನು ಭೇದಿಸಿರುವುದು.
  • 02-06-2019ರಂದು ಗುಂಡ್ಲುಪೇಟೆ ಬಫರ್ ವಲಯದಲ್ಲಿ ಮೃತಪಟ್ಟಿದ್ದ ಚಿರತೆ ಪ್ರಕರಣ ಪತ್ತೆಹಚ್ಚುವಲ್ಲಿ ಭಾಗಿ.
  • ಗುಂಡ್ರೆ ವಲಯ ವ್ಯಾಪ್ತಿಯಲ್ಲಿ ಕಾಡೆಮ್ಮೆ ಕಳ್ಳಬೇಟೆ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಭಾಗಿ.
  • ಗುಂಡ್ರೆ ವಲಯ ವ್ಯಾಪ್ತಿಯಲ್ಲಿ ಹುಲಿಯ ಸಾವಿನ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಭಾಗಿ.
  • ಜಿ.ಎಸ್. ಬೆಟ್ಟ ವಲಯ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಹುಲಿಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿ.
  • 26-08-2015ರಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕಲ್ಲಳ್ಳ ವಲಯದಲ್ಲಿ ಹುಲಿ ಹತ್ಯೆ ಪ್ರಕರಣದ ಸಂಬಂಧ ಆರೋಪಿಗಳನ್ನು ಪತ್ತೆ ಮಾಡಿರುವುದು.
  • ನಂಜನಗೂಡು ಮತ್ತು ಹೆಚ್.ಡಿ ಕೋಟೆ ವಲಯಗಳಲ್ಲಿ ಚಿರತೆ ಸಾವಿನ ಪ್ರಕರಣದ ಪತ್ತೆಹಚ್ಚುವಲ್ಲಿ ಭಾಗಿ.
  • ಮಡಿಕೇರಿ ವಿಭಾಗದ ಪೊನ್ನಂಪೇಟೆ ವಲಯದಲ್ಲಿ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಭಾಗಿ.
  • 29-10-2021ರಂದು ನುಗು ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಶ್ರೀಗಂಧ ಅಕ್ರಮ ಕಡಿತಲೆ ಪ್ರಕರಣದಲ್ಲಿ
    ಭಾಗಿಯಾಗಿ ಅರೋಪಿಗಳ ಬಂಧನಕ್ಕೆ ಕಾರಣವಾಗಿರುವುದು.
  • ಹೆಡಿಯಾಲ ವಲಯದಲ್ಲಿ ಹುಲಿ ಸಾವಿನ ಪ್ರಕರಣ ಪತ್ತೆಹಚ್ಚುವಲ್ಲಿ ಭಾಗಿಯಾಗಿರುವುದು.
  • 02-06-2021ರಂದು ಜಿ.ಎಸ್. ಬೆಟ್ಟ ವಲಯದ ಕುರುಬನಕಟ್ಟೆ ಅರಣ್ಯ ಪ್ರದೇಶದಲ್ಲಿ ಉರುಳು ಹಾಕಿದ್ದವರ ಪತ್ತೆಗೆ ನೆರವು.
  • 14-02-2022ರಂದು ಆನೆ ಚೌಕೂರು ವಲಯದಲ್ಲಿ ಹುಲಿ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ನೆರವು.
  • 09-09-2021ರಂದು ಮೂಲೆಹೊಳೆ ವಲಯದಲ್ಲಿ ಅಕ್ರಮ ಶ್ರೀಗಂಧದ ಅಕ್ರಮ ಕಡಿತಲೆ ಪ್ರಕರಣ ಪತ್ತೆ ಹಚ್ಚುವಲ್ಲಿ ಭಾಗಿ.
  • 14-09-2021ರಂದು ಗುಂಡ್ರೆ ವಲಯದಲ್ಲಿ ಉರುಳಿನಿಂದ ಮೃತಪಟ್ಟ ಹುಲಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ನೆರವಾಗಿರುವುದು.
  • ದಿನಾಂಕ 03-10-2021ರಂದು ತಮಿಳುನಾಡಿನ ಮುಧುಮಲೈ ಹುಲಿ ಸಂರಕ್ಷಿತ ಪ್ರದೇಶದ ಮಸಣಗುಡಿ ಪ್ರದೇಶದಲ್ಲಿ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವುದು.

ಮೃತ 'ರಾಣಾ'ನ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ನಿರ್ದೇಶಕರು, ಹುಲಿಯೋಜನೆ, ಬಂಡೀಪುರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಬಂಡೀಪುರ ಹಾಗೂ ಹೆಡಿಯಾಲ ಉಪವಿಭಾಗ, ರಕ್ಷಣಾ ಸಿಬ್ಬಂದಿು, ಜಿ.ಎಸ್.ಬೆಟ್ಟವಲಯ ಹಾಗೂ ವಿಶೇಷ ಹುಲಿ ಸಂರಕ್ಷಣಾ ದಳ ನೆರವೇರಿಸಿ, ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ:ಕಾಡುಗಳ್ಳರ ಸಿಂಹಸ್ವಪ್ನ ಬಂಡೀಪುರದ ರಾಣಾ ಇನ್ನಿಲ್ಲ

Last Updated : Aug 2, 2022, 7:58 PM IST

ABOUT THE AUTHOR

...view details