ಚಾಮರಾಜನಗರ: ರಾಜ್ಯವಷ್ಟೇ ಅಲ್ಲದೇ ದೇಶದೆಲ್ಲಡೆ ಜನಪ್ರಿಯ ಗಳಿಸಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ಈಗ 50 ರ ಹೊಸ್ತಿಲಿಗೆ ಬಂದು ನಿಂತಿದ್ದು,ಸುವರ್ಣ ಸಂಭ್ರಮದ ಆಚರಿಸಿಕೊಳ್ಳುತ್ತಿದೆ. ಪ್ರಾಜೆಕ್ಟ್ ಟೈಗರ್ ನ ಮೊದಲ ಹುಲಿ ಸಂರಕ್ಷಿತ ಪ್ರದೇಶದಡಿ ಒಂದಾಗಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ವಿದೇಶಗಳಾಚೆಯೂ ತನ್ನ ಖ್ಯಾತಿಯನ್ನು ಪಸರಿಸಿದೆ.
ಬೆಂಗಾಲ್ ಟೈಗರ್ ಸಂರಕ್ಷಣೆ :ಬೆಂಗಾಲ್ ಟೈಗರ್ ಸಂತತಿ ಉಳಿಸಿ ಬೆಳೆಸಲು ಹಾಗೂ ಸಮತೋಲಿತ ಪರಿಸರ ಕಾಪಾಡುವ ಉದ್ದೇಶದಿಂದ 1973 ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದ 9 ಕಡೆಗಳಲ್ಲಿ ಹುಲಿ ಸಂರಕ್ಷಿತ ಪ್ರದೇಶಗಳನ್ನು ಘೋಷಣೆ ಮಾಡಿದ್ದರು. ಆ ಒಂಭತ್ತರ ಪಟ್ಟಿಯಲ್ಲಿ ಬಂಡೀಪುರವು ಅರಣ್ಯ ಪ್ರದೇಶವೂ ಒಂದು. ಅಂದು ಕೇವಲ 10-12 ಹುಲಿಗಳ ಸಂರಕ್ಷಣೆಯಿಂದ ಆರಂಭವಾಗಿದ್ದ ಬಂಡೀಪುರ ಅರಣ್ಯವಲಯ ಇಂದು ಹುಲಿಗಳದ್ದೇ ರಾಜ್ಯಭಾರ ಅನ್ನುವಷ್ಟು ಹತ್ತುಪಟ್ಟು ದ್ವಿಗುಣಗೊಂಡಿದೆ.
140ಕ್ಕಿಂತ ಹೆಚ್ಚು ಹುಲಿ ಸಮೀಕ್ಷೆ: ವನ್ಯಜೀವಿ ಬೇಟೆಗೆ, ಕಳ್ಳರಿಗೆ ಸೀಮಿತವಿದ್ದ ಅರಣ್ಯದಲ್ಲಿ 1973ರಿಂದ ಪರಿಣಾಮಕಾರಿ ವನ್ಯಜೀವಿ ಸಂರಕ್ಷಣೆಯಲ್ಲಿ ಸರಕಾರರ ಅರಣ್ಯವಿಭಾಗವು ತೊಡಗಿದೆ. ಅಂದು 10 ಹುಲಿಗಳಿದ್ದ ಕಾಡಲ್ಲಿ 2020ರಲ್ಲಿ 140ಕ್ಕೂ ಹೆಚ್ಚು ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. 2023 ರ ಮಾರ್ಚ್ ನಲ್ಲಿ ಇನ್ನು ಹೆಚ್ಚಾಗಿ ವ್ಯಾಘ್ರಗಳ ಸಂಖ್ಯೆ 150 ದಾಟಿದರೂ ಅಚ್ಚರಿ ಪಡಬೇಕಿಲ್ಲ ಎನ್ನಲಾಗುತ್ತಿದೆ.
ಮಾಂಸಹಾರಿ ಪ್ರಾಣಿಗಳಿಗೆ ಸಮೃದ್ಧತಾಣ :13 ವಲಯ ಮೂರು ಉಪ ವಿಭಾಗ ಇರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದು ಆನೆ ಶಿಬಿರವೂ ಇದ್ದು ತಮಿಳುನಾಡು ಮತ್ತು ಕೇರಳ ಗಡಿಯನ್ನು ಈ ಅರಣ್ಯ ಪ್ರದೇಶ ಹಂಚಿಕೊಂಡಿದೆ. 1200 ಚದರ್ ಕಿ.ಮೀ ವ್ಯಾಪ್ತಿಯ ಅರಣ್ಯದಲ್ಲಿ ಮಾಂಸಹಾರಿ ಪ್ರಾಣಿಗಳಿಗೆ ಅಗತ್ಯವಿದ್ದಷ್ಟು ಬೇಟೆಗೆ ಪ್ರಾಣಿಗಳು ವೃದ್ಧಿಗೊಂಡಿರುವುದು, ನೀರಿನ ಸಮಸ್ಯೆ ಬಾಧಿಸದಿರುವುದು, ಕಳ್ಳಬೇಟೆ ಕಡಿಮೆಯಾಗಿರುವುದು, ರಾತ್ರಿ ಸಂಚಾರ ನಿಷೇಧದಿಂದ ಪ್ರಾಣಿಗಳ ಓಡಾಟಕ್ಕೆ ನಿರಾಂತಕ ವಾತಾವರಣ ನಿರ್ಮಾಣ ಆಗಿರುವುದು ಬಂಡೀಪುರಕ್ಕೆ ಪ್ಲಸ್ ಪಾಯಿಂಟ್ ಆಗಿದೆ.