ಚಾಮರಾಜನಗರ:ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕುಂದಕೆರೆ ವಲಯದ ಚಿರಕನಹಳ್ಳಿ ಗ್ರಾಮದ ಚಿಕ್ಕತೋಟದ ಶನೇಶ್ವರ ತೋಪಿನ ಬಳಿ ಶನಿವಾರ ಸಂಜೆ ಅಂದಾಜು 65 ವರ್ಷದ ಹೆಣ್ಣಾನೆ ಮೃತಪಟ್ಟಿದೆ. ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಗಡಿ ದಾಟಿ ಬಂಡೀಪುರ ವ್ಯಾಪ್ತಿಯ ಕುಂದಕೆರೆ ವಲಯಕ್ಕೆ ಬಂದಿದ್ದ ಹೆಣ್ಣಾನೆಯೊಂದು ವಯೋ ಸಹಜವಾಗಿ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಬಂಡೀಪುರ ಅರಣ್ಯಕ್ಕೆ ಬಂದಿದ್ದ ಆನೆ ಕುಂದಕೆರೆ ವಲಯದ ಕಡಬೂರು ಗ್ರಾಮದ ಸುತ್ತಮುತ್ತ ಸಂಚರಿಸುತ್ತಿರುವ ವಿಚಾರ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ದಿಕ್ಕು ತಪ್ಪಿ ಬಂದಿದ್ದ ಆನೆಯನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆಯನ್ನು ಅಧಿಕಾರಿಗಳು ಕೈಗೊಂಡಿದ್ದರು. ಆದರೆ ಕಾಡಿಗೆ ಹಿಂದಿರುಗದೆ ಪೋತರಾಜು ಎಂಬವರ ಜಮೀನಿನಲ್ಲಿ ಬೀಡು ಬಿಟ್ಟಿತ್ತು. ಆ ಬಳಿಕ ಕೂಡ ರಾತ್ರಿ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ, ಆನೆಯನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯ ಚುರುಕುಗೊಳಿಸಿದ್ದರು. ಆದರೂ ಸಫಲವಾಗಲಿಲ್ಲ. ಮರುದಿನ ಮಧ್ಯಾಹ್ನದ ವೇಳೆ ಚಿರಕನಹಳ್ಳಿ ಗ್ರಾಮದ ಸಮೀಪ ಆನೆ ಸಾವನ್ನಪ್ಪಿರುವುದಾಗಿ ಬಂಡೀಪುರ ಸಿಎಫ್ ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಆನೆ ಸಾವನ್ನಪ್ಪಿದ ಸ್ಥಳಕ್ಕೆ ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ರವೀಂದ್ರ, ಪಶು ವೈದ್ಯಾಧಿಕಾರಿ ಡಾ.ಮಿರ್ಜಾ ವಾಸೀಂ, ಕುಂದಕೆರೆ ಆರ್ಎಫ್ಓ ಶ್ರೀನಿವಾಸ್ ತೆರಳಿ ಮರಣೋತ್ತರ ಪರೀಕ್ಷೆ ನಡೆಸಿದರು. ಅಂಗಾಂಗ ಮಾದರಿ ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ವರದಿ ಬಂದ ನಂತರ ಸಾವಿಗೆ ನೈಜ ಮಾಹಿತಿ ತಿಳಿದು ಬರಲಿದೆ. ಮೇಲ್ನೋಟಕ್ಕೆ ಸಹಜ ಸಾವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನಾಡಿನಲ್ಲಿ ಚುನಾವಣಾ ಮತಯುದ್ಧ: ಬಂಡೀಪುರ ಕಾಡಲ್ಲಿ ಮದಗಜಗಳ ಕಾದಾಟ
ಗ್ರಾಮಕ್ಕೆ ನುಗ್ಗಿದ್ದ ಆನೆ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಮರೂರು ಗ್ರಾಮಕ್ಕೆ ಇತ್ತೀಚೆಗೆಆನೆಯೊಂದು ಗ್ರಾಮಕ್ಕೆ ನುಗ್ಗಿ ಹಾನಿ ಮಾಡಿತ್ತು. ಗ್ರಾಮಕ್ಕೆ ನುಗ್ಗಿದ್ದ ಆನೆಯು ನಾಗಣ್ಣ ಎಂಬವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಹಾಗೂ ಗೇಟ್ ತುಳಿದು ಹಾನಿ ಮಾಡಿತ್ತು. ಹಲಸಿನ ಮರ ಮುರಿದು ಹಾಕಿದ್ದರಿಂದ ಫಸಲು ಕೂಡ ಹಾನಿಯಾಗಿದೆ. ಆನೆಯ ದಾಳಿ ಶಬ್ದ ಕೇಳುತ್ತಿದ್ದಂತೆ ಜಾಗೃತರಾಗುವ ಗ್ರಾಮಸ್ಥರು ನಿತ್ಯ ರಾತ್ರಿ ಕಾಡಿನತ್ತ ಆನೆಯನ್ನು ಓಡಿಸುತ್ತಿದ್ದಾರೆ. ಗ್ರಾಮಸ್ಥರು ಆತಂಕದಲ್ಲೇ ಬದುಕುತ್ತಿದ್ದು, ಸಮಸ್ಯೆ ಪರಿಹರಿಸುವಂತೆ ಅರಣ್ಯಾಧಿಕಾರಿಗೆ ಮನವಿ ಮಾಡುತ್ತಲೇ ಇದ್ದಾರೆ.