ಚಾಮರಾಜನಗರ: ಇಂದು ಪ್ರಭುತ್ವ ಮನುಷ್ಯರ ಕೈಯಲ್ಲಿಲ್ಲ, ಕ್ರೂರಿಗಳ ಕೈಯಲ್ಲಿದೆ. ಅಂದಮೇಲೆ ದೆಹಲಿಯಲ್ಲಿ ಪ್ರತಿಭಟನಾಕಾರರ ಮೇಲೆ ಮಾನವೀಯವಾಗಿ ವರ್ತಿಸಬೇಕು ಎಂಬ ನಿರೀಕ್ಷೆ ಹೇಗೆ ತಾನೆ ಇಟ್ಟಕೊಳ್ಳುವುದು ಎಂದು ಕೇಂದ್ರ ಸರ್ಕಾರದ ವಿರುದ್ಧ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ನೇತಾರ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ ಜನ್ಮದಿನವನ್ನು ರೈತ ಸಂಘದ ಎರಡು ಬಣಗಳು ಪ್ರತ್ಯೇಕವಾಗಿ ಜಿಲ್ಲೆಯಲ್ಲಿ ಆಚರಿಸಿದವು. ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರೈತ ಪ್ರತಿಭಟನೆಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 30 ವರ್ಷಗಳ ಹಿಂದೆಯೇ ನಂಜುಂಡಸ್ವಾಮಿ ಹೇಳಿದ್ದ ಎಚ್ಚರಿಕೆಯ ಮಾತುಗಳು ಈಗ ನಿಜವಾಗುತ್ತಿದೆ. ಅವರ ಹೇಳಿಕೆಗಳು ಇಂದಿಗೂ ಪ್ರಸ್ತುತವಾಗುತ್ತಿದೆ. ಬ್ರಿಟಿಷರ ಕಾಲದಲ್ಲಿ ಒಂದು ಕಂಪನಿ ಇತ್ತು, ಈಗ ಹತ್ತಾರು ಕಂಪನಿಗಳು ರೈತನ ಬೆನ್ನುಲುಬು ಮುರಿಯುತ್ತಿವೆ. ಪ್ರಭುತ್ವದ ವರ್ತನೆಯೂ ಬಂಡವಾಳಶಾಹಿಗಳ ಪರವೇ ಇದೆ. ಕನ್ವಿನ್ಸ್ ಮಾಡಲಾಗದಿದ್ದರೇ ಕನ್ಫ್ಯೂಸ್ ಮಾಡಿ ಎಂಬ ಹೇಳಿಕೆಯಂತೆ ಕೇಂದ್ರ ಸರ್ಕಾರ ನಡೆಯುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದರು.
ರೈತ ಸಂಘದ ವಿಭಾಗೀಯ ಕಾರ್ಯದರ್ಶಿ ಮಹೇಶ್ ಪ್ರಭು ಮಾತನಾಡಿ, ಲೋಕಸಭೆ, ರಾಜ್ಯಸಭೆ ಅಧಿವೇಶನ ನಡೆಯುತ್ತಿದೆ. ಆದರೆ ದೆಹಲಿ ಪ್ರತಿಭಟನೆಯಲ್ಲಿ ಮೃತಪಟ್ಟವರಿಗೆ ಕನಿಷ್ಠ ಶ್ರದ್ಧಾಂಜಲಿ ಸಲ್ಲಿಸುವಷ್ಟು ನಮ್ಮ ಜನಪ್ರತಿನಿಧಿಗಳಿಗೆ ಸಮಯವಿಲ್ಲವೇ ಎಂದು ಆಕ್ರೋಶ ಹೊರಹಾಕಿದರು.