ಚಾಮರಾಜನಗರ: ಹದಗೆಟ್ಟ ರಸ್ತೆಯಿಂದಾಗಿ ಆಟೋ ಪಲ್ಟಿಯಾಗಿ ಚಾಲಕ ಮೃತಪಟ್ಟಿರುವ ಘಟನೆ ನಗರದ ಗ್ರಾಮಾಂತರ ಪೊಲೀಸ್ ಠಾಣೆ ರಸ್ತೆಯಲ್ಲಿ ನಡೆದಿದೆ.
ನಗರದ ಮಹದೇಶ್ವರ ಬಡಾವಣೆ ನಿವಾಸಿ ಮಂಜುನಾಥ್(38) ಮೃತ ದುರ್ದೈವಿಯಾಗಿದ್ದಾರೆ. ಗುಂಡಿಗಳಿಂದ ತುಂಬಿರುವ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಆಟೋ ಕೆಳಗಿನ ಹಳ್ಳಕ್ಕೆ ಉರುಳಿ ಸ್ಥಳದಲ್ಲೇ ಚಾಲಕ ಅಸುನೀಗಿದ್ದಾನೆ ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಮತ್ತು ಸಂಬಂಧಿಕರು ಜಿಲ್ಲಾಸ್ಪತ್ರೆ ಮುಂಭಾಗ ಶವವಿಟ್ಟು ಪರಿಹಾರ ನೀಡಬೇಕು ಮತ್ತು ರಸ್ತೆ ಸರಿಪಡಿಸಬೇಕೆಂದು ಒತ್ತಾಯಿಸಿ ಪ್ರತಿಭಟಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ನಗರಸಭೆ ಪೌರಾಯುಕ್ತ ಎಂ.ರಾಜಣ್ಣ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತನಾಡಿದರು. ಪ್ರತಿಭಟನಾ ಸ್ಥಳಕ್ಕೆ ನಗರಸಭೆ ಪೌರಾಯುಕ್ತ ಎಂ.ರಾಜಣ್ಣ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಮೃತರ ಕುಟುಂಬದ ಸದಸ್ಯರೊಬ್ಬರಿಗೆ ನಗರಸಭೆ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡಲಾಗುವುದು ಹಾಗೂ ರಸ್ತೆ ಕಾಮಗಾರಿ ಕೈಗೊಂಡು, ಅಪಘಾತಕ್ಕೆ ಕಾರಣರಾಗಿರುವ ಗುತ್ತಿಗೆದಾರನೊಂದಿಗೆ ಚರ್ಚಿಸಿ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಸಿಗುವಂತೆ ಕ್ರಮವಹಿಸುತ್ತೇವೆ ಎಂದು ಭರವಸೆ ನೀಡಿದ ಬಳಿಕ ಸಾರ್ವಜನಿಕರು ಮತ್ತು ಸಂಬಂಧಿಕರು ಪ್ರತಿಭಟನೆ ಕೈ ಬಿಟ್ಟರು.
ಓದಿ:30ಕ್ಕೂ ಹೆಚ್ಚು ಕೋತಿಗಳ ಮಾರಣಹೋಮ: ವಿಷ ಉಣಿಸಿ ಕೊಂದರಾ ಪಾಪಿಗಳು!?