ಚಾಮರಾಜನಗರ: ಮದುವೆ ಎಂದರೆ ಸಂಭ್ರಮ, ಸ್ನೇಹಿತರೊಂದಿಗೆ ಫೋಟೊ, ಮಧುಚಂದ್ರದ ಸಿದ್ಧತೆ ಮುಂದೆ ಎಲ್ಲವೂ ಗೌಣ. ಆದರೆ, ಇಲ್ಲೋರ್ವ ವಧು ಮದುವೆಯ ಸಂಭ್ರಮದಲ್ಲೂ ಪದವಿ ಪರೀಕ್ಷೆಗೆ ಹಾಜರಾಗಿ ಶಿಕ್ಷಣದ ಮಹತ್ವ ಸಾರಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಗ್ರಾಮದ ಶ್ರೀಶೋಭಾ ಎಂಬ ನವವಧು ಮಾಂಗಲ್ಯ ಧಾರಣೆ ಬಳಿಕ ಸ್ವಗ್ರಾಮದಲ್ಲೇ ಇರುವ ಶ್ರೀಮದ್ದಾನೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಬಿಎ ರಾಜ್ಯಶಾಸ್ತ್ರ ಪರೀಕ್ಷೆ ಬರೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಮದುವೆ ಸಂಭ್ರಮದ ನಡುವೆಯೂ ಪರೀಕ್ಷೆ ಬರೆದ ಮಧುವಣಗಿತ್ತಿ...! ಕುಂದಕೆರೆಯ ಗ್ರಾಮದ ಮಣಿಕಂಠ ಎಂಬವರೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ, ಮದುವೆ ದಿನದಂದೇ ಪರೀಕ್ಷೆಯೂ ಇತ್ತು. ಓದಿನಲ್ಲಿ ಮುಂದಿರುವ ಶ್ರೀಶೋಭಾ ಪರೀಕ್ಷೆ ತಪ್ಪಿಸಿಕೊಳ್ಳಲು ಇಷ್ಟಪಡದೇ ಮದುವೆಯ ಸಂಭ್ರಮದಲ್ಲೂ ಪರೀಕ್ಷೆ ಬರೆದು ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.
ಈ ಕುರಿತು ಕಾಲೇಜು ಆಡಳಿತ ಮಂಡಳಿ ಮತ್ತು ವಧುವಿನ ಸಂಬಂಧಿಕರು ಶ್ರೀಶೋಭಾ ಕಾರ್ಯಕ್ಕೆ ಜೈ ಎಂದಿದ್ದಾರೆ. ಈಕೆಯ ನಡೆ ಇನ್ನಿತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ.