ಚಾಮರಾಜನಗರ: ಮಾಹಿತಿ ಹಕ್ಕಿನಡಿ ಅರ್ಜಿ ಹಾಕಿ ಕಾಮಗಾರಿ ವಿವರ ಪಡೆದಿದ್ದಕ್ಕೆ ಕುಪಿತಗೊಂಡ ಗ್ರಾಪಂ ಉಪಾಧ್ಯಕ್ಷ ಮಾಹಿತಿ ಹಕ್ಕು ಹೋರಾಟಗಾರ ಮತ್ತು ಗ್ರಾಪಂ ಸದಸ್ಯೆ ಕುಟುಂಬದ ಮೇಲೆ ದೌರ್ಜನ್ಯ ನಡೆಸಿ, ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಯಳಂದೂರು ತಾಲೂಕಿನ ಅಂಬಳೆ ಗ್ರಾಮದಲ್ಲಿ ನಡೆದಿದೆ.
ಅಂಬಳೆ ಗ್ರಾಪಂ ಉಪಾಧ್ಯಕ್ಷ ಸಿದ್ದನಾಯ್ಕ ಎಂಬಾತ ಅದೇ ಗ್ರಾಮದ ಶಂಕರ್, ಗಣೇಶ್, ಮಹಾದೇವ ಎಂಬುವರೊಟ್ಟಿಗೆ ಸೇರಿಕೊಂಡು ಗ್ರಾಪಂ ಸದಸ್ಯೆಯ ಸಂಬಂಧಿ ವಿ. ವೀರಭದ್ರ ಎಂಬುವರಿಗೆ ಮನಬಂದಂತೆ ಥಳಿಸಿ ಮಚ್ಚಿನಿಂದ ಹೊಡೆದಿದ್ದಾರೆ. ಇದಕ್ಕೂ ಮುನ್ನ, ಮಾಹಿತಿ ಹಕ್ಕು ಹೋರಾಟಗಾರ ಮಹಾದೇವನಾಯಕನಿಗೆ ಥಳಿಸಿದ್ದಾನೆ ಎನ್ನಲಾಗಿದೆ.
ಅಂಬಳೆ ಗ್ರಾಪಂನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಹಾಗೂ ಕಳಪೆ ಕಾಮಗಾರಿಗಳ ಬಗ್ಗೆ ಮಹಾದೇವನಾಯಕ ಮಾಹಿತಿ ಹಕ್ಕಿನಡಿ ಅರ್ಜಿ ಹಾಕಿ ಕಾಮಗಾರಿಗಳ ವಿವರ ಪಡೆದುಕೊಂಡಿದ್ದಾರೆ. ಇದಕ್ಕೆ ಗ್ರಾಪಂ ಸದಸ್ಯೆ ಗೀತಾ ಮಹೇಶ್ ಮತ್ತು ಇವರ ಸಂಬಂಧಿ ವಿ. ವೀರಭದ್ರಸ್ವಾಮಿ ಸಹಾಯ ಮಾಡಿದ್ದರಂತೆ. ಈ ವಿಚಾರ ಅರಿತ ಸಿದ್ದನಾಯಕ ಏಕಾಏಕಿ ಮಾಹಿತಿ ಹಕ್ಕು ಹೋರಾಟಗಾರ ಮಹಾದೇವನಾಯಕ ಮತ್ತು ವಿ. ವೀರಭದ್ರ ಅವರಿಗೆ ಹಲ್ಲೆ ನಡೆಸಿ ಗ್ರಾಪಂ ಸದಸ್ಯೆ ಗೀತಾ ಮಹೇಶ್ ಅವರನ್ನು ನಿಂದಿಸಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಧಾರವಾಡ: ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿ - ಇಬ್ಬರು ಸ್ಥಳದಲ್ಲೇ ಸಾವು
ಸದ್ಯ, ವಿ. ವೀರಭದ್ರ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ರಾಪಂ ಉಪಾಧ್ಯಕ್ಷ ಸಿದ್ದನಾಯಕ ಸೇರಿದಂತೆ ನಾಲ್ವರ ವಿರುದ್ಧ ಯಳಂದೂರು ಠಾಣೆಯಲ್ಲಿ ಕೊಲೆ ಯತ್ನದ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಕೊಳ್ಳೇಗಾಲ ಡಿವೈಎಸ್ಪಿ ಭೇಟಿ ನೀಡಿದ್ದಾರೆ.