ಕರ್ನಾಟಕ

karnataka

ETV Bharat / state

55ನೇ ವಯಸ್ಸಿಗೆ ಎಸ್​ಎಸ್​ಎಲ್​ಸಿ ಪಾಸ್ ಮಾಡಲು ಟೊಂಕ ಕಟ್ಟಿದ ಆಶಾ ಕಾರ್ಯಕರ್ತೆ: ಈ ಉತ್ಸಾಹಕ್ಕೆ ಪತಿ, ಮಕ್ಕಳ ಸಾಥ್! - ಆಶಾ ಕಾರ್ಯಕರ್ತೆ ಜಯಸುಂದರಿ

ಇವರು ಕೊಳ್ಳೇಗಾಲ ತಾಲೂಕಿನ‌ ಮಧುವನಹಳ್ಳಿ ಗ್ರಾಮದ ಆಶಾ ಕಾರ್ಯಕರ್ತೆ ಜಯಸುಂದರಿ. ತಮ್ಮ ಮೂವರು ವಿದ್ಯಾವಂತ ಮಕ್ಕಳಿಂದ ಸ್ಫೂರ್ತಿಗೊಂಡು 55 ನೇ ವಯಸ್ಸಿನಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಮುಂದೆ ಪಿಯುಸಿ ಪರೀಕ್ಷೆಯನ್ನು ಬರೆಯುವ ಉತ್ಸಾಹ ತೋರಿದ್ದಾರೆ.

Asha activist
ಜಯಸುಂದರಿ

By

Published : Jun 30, 2020, 1:49 PM IST

ಚಾಮರಾಜನಗರ: ವಿದ್ಯೆಗೆ ವಯಸ್ಸಿನ ಮಿತಿಯೂ ಇಲ್ಲ, ಬಡವ-ಶ್ರೀಮಂತ ಎಂಬ ಬೇಧವೂ ಇಲ್ಲ ಎಂಬುದಕ್ಕೆ‌ 55ನೇ ವಯಸ್ಸಿನಲ್ಲಿ ಎಸ್​ಎಸ್​ಎಲ್​ಸಿ ಬರೆಯುತ್ತಿರುವ ಈ ಮಹಿಳೆಯೇ ಸಾಕ್ಷಿಯಾಗಿದ್ದಾರೆ.

ಇವರು ಕೊಳ್ಳೇಗಾಲ ತಾಲೂಕಿನ‌ ಮಧುವನಹಳ್ಳಿ ಗ್ರಾಮದ ಆಶಾ ಕಾರ್ಯಕರ್ತೆ ಜಯಸುಂದರಿ. ತಮ್ಮ ಮೂವರು ವಿದ್ಯಾವಂತ ಮಕ್ಕಳಿಂದ ಸ್ಫೂರ್ತಿಗೊಂಡು 55 ನೇ ವಯಸ್ಸಿನಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಮುಂದೆ ಪಿಯುಸಿ ಪರೀಕ್ಷೆಯನ್ನು ಬರೆಯುವ ಉತ್ಸಾಹ ತೋರಿದ್ದಾರೆ. ಅವರ ಉತ್ಸಾಹಕ್ಕೆ ಮಕ್ಕಳು ಮತ್ತು ಪತಿ ಬಲ ತುಂಬಿದ್ದಾರೆ.

ಪರೀಕ್ಷೆಯನ್ನು ಬರೆಯುವ ಉತ್ಸಾಹ ತೋರಿದ ಜಯಸುಂದರಿ

ಜಯಸುಂದರಿ ಅವರಿಗೆ ಮೂವರು ಮಕ್ಕಳಿದ್ದು ಓರ್ವ ಮಗಳು ನರ್ಸ್, ಮತ್ತಿಬ್ಬರು ಸಾಫ್ಟ್‌ವೇರ್ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದಾರೆ. ಮಕ್ಕಳು ಓದಿ ಉದ್ಯೋಗ ಹಿಡಿದಿದ್ದಾರೆ. ನಾನೇಕೆ ಎಸ್​ಎಸ್​ಎಲ್​ಸಿ ಫೇಲ್ ಎಂಬ ಅಂಜಿಕೆಯಲ್ಲಿರಲಿ ಎಂದು ಈ ಬಾರಿ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ತೆಗೆದುಕೊಂಡು ಎಸ್​ಎಸ್​ಎಲ್​ಸಿಯಲ್ಲಿ ಉತ್ತೀರ್ಣರಾಗಲು ಟೊಂಕ ಕಟ್ಟಿದ್ದಾರೆ.

ಕಳೆದ 3 ತಿಂಗಳುಗಳಿಂದ ಲಾಕ್​ಡೌನ್​ ಪರಿಣಾಮ ಇಬ್ಬರು ಮಕ್ಕಳು ಮನೆಯಲ್ಲೇ ಇದ್ದು ತಾಯಿಯ ಪರೀಕ್ಷಾ ತಯಾರಿಗೆ ಸಾಥ್ ನೀಡಿದ್ದಾರೆ. ಗಣಿತ, ಇಂಗ್ಲಿಷ್ ವಿಷಯಗಳನ್ನು ಹೇಳಿಕೊಟ್ಟಿದ್ದಾರೆ. ಬಿಡುವಿನ ವೇಳೆಯಲ್ಲಿ ವಿಷಯದ ಪ್ರಮುಖ ಭಾಗಗಳು, ಮುಖ್ಯ ಪಾಠಗಳು, ವಿಜ್ಞಾನಕ್ಕೆ ಸಂಬಂಧಿಸಿದ ಫಾರ್ಮುಲಾಗಳನ್ನು ಬರೆದುಕೊಟ್ಟು ಕಠಿಣ ಅಭ್ಯಾಸವನ್ನೇ ಮಾಡಿಸಿದ್ದಾರೆ. ಅಸಾಧ್ಯವಾದುದು ಯಾವುದೂ ಇಲ್ಲ. ಎಸ್​ಎಸ್​ಎಲ್​ಸಿಯಲ್ಲಿ ಉತ್ತಮ ಅಂಕ ಪಡೆದೇ ಪಡೆಯುತ್ತೀಯ ಎಂದು ಪತಿಯೂ ಹುರಿದುಂಬಿಸಿರುವುದಾಗಿ ಜಯಸುಂದರಿ ಈಟಿವಿ ಭಾರತಕ್ಕೆ ಉತ್ಸಾಹದಿಂದಲೇ ಪ್ರತಿಕ್ರಿಯಿಸಿದರು.

ಇದೇ ವೇಳೆ, ಕೊರೊನಾ ಭೀತಿಯಿಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ, ನಾನು ಆಶಾಕಾರ್ಯಕರ್ತೆ. ಮತ್ತೊಬ್ಬರ ಸೇವೆ ಮಾಡುವವಳು, ನಾನೇಕೆ ಭಯಪಡಬೇಕು ಎಂದರು. ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸುತ್ತೇನೆ, ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುತ್ತೇನೆ ಎಂದು ಉತ್ತರಿಸಿದರು. ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ಉತ್ಸಾಹದಿಂದ ಬರೆಯುತ್ತಿರುವ ಜಯಸುಂದರಿ ಅವರು ಮುಂದೆಯೂ ಕೂಡ ಉನ್ನತ ವ್ಯಾಸಂಗದಲ್ಲಿ ತೊಡಗಿ ಇತರರಿಗೆ ಮಾದರಿಯಾಗಲಿ ಎಂಬುದು 'ಈಟಿವಿ ಭಾರತ' ಆಶಯ.

ABOUT THE AUTHOR

...view details