ಮಾದಪ್ಪನ ಬೆಟ್ಟದ ತಪ್ಪಲಿನಲ್ಲಿ ಪುಂಡಾನೆ ಸೆರೆಗೆ ಮುಂದಾದ ಅರ್ಜುನ ಆ್ಯಂಡ್ ಟೀಂ ಚಾಮರಾಜನಗರ: ನಿತ್ಯ ಕೃಷಿ ಭೂಮಿಗೆ ದಾಂಗುಡಿ ಇಟ್ಟು ಬೆಳೆನಾಶ ಸೇರಿದಂತೆ ಕೃಷಿ ಪರಿಕರಗಳನ್ನು ನಾಶ ಮಾಡುತ್ತಿದ್ದ ಪುಂಡಾನೆ ಸೆರೆಗೆ ಇಂದು ಕಾರ್ಯಾಚರಣೆ ಆರಂಭವಾಗಿದ್ದು, ಅರ್ಜುನ ಆ್ಯಂಡ್ ಟೀಂ ಆಪರೇಷನ್ ಶುರು ಮಾಡಿವೆ. ಹನೂರು ತಾಲೂಕಿನ ಪೊನ್ನಾಚಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಉಪಟಳ ಕೊಡುತ್ತಿದ್ದ ಪುಂಡಾನೆ ಸೆರೆ ಹಿಡಿಯಬೇಕು ಎಂಬ ಜನರ ತೀವ್ರ ಒತ್ತಡಕ್ಕೆ ಮಣಿದ ಅರಣ್ಯ ಇಲಾಖೆ ಇಂದಿನಿಂದ ಆನೆ ಸೆರೆ ಕಾರ್ಯಾಚರಣೆ ಆರಂಭ ಮಾಡಿದೆ.
ನಾಗರಹೊಳೆ ಅಭಯಾರಣ್ಯದಿಂದ ಅರ್ಜುನ ನಾಯಕತ್ವದಲ್ಲಿ ಬಲರಾಮ, ಕರ್ಣ, ಅಶ್ವತ್ಥಾಮ ಸೇರಿದಂತೆ ಆರು ಆನೆಗಳು ಬಂದಿಳಿದಿದ್ದು, ಮಲೆಮಹದೇಶ್ವರ ವನ್ಯಧಾಮದ ಪೊನ್ನಾಚಿ ಅರಣ್ಯ ಪ್ರದೇಶದಲ್ಲಿ ಅನೆ ಸೆರೆ ಕಾರ್ಯಾಚರೆ ಆರಂಭವಾಗಿದೆ. 3 ದಿನಗಳ ಕಾಲ ಈ ಆಪರೇಷನ್ ನಡೆಯಲಿದ್ದು, ಆನೆ ಸೆರೆ ಸಿಗದಿದ್ದರೆ ಮತ್ತೆ ಕಾರ್ಯಾಚರಣೆ ಮುಂದುವರೆಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದಲೂ ಪುಂಡಾನೆಯೊಂದು ಕಾಡಂಚಿನ ಜನರಿಗೆ ವ್ಯಾಪಕ ತೊಂದರೆ ಕೊಡುತ್ತಿತ್ತು. ಜಮೀನಿನಲ್ಲಿರುವ ಫಸಲು ತಿಂದು ಹಾಳು ಮಾಡುವುದರ ಜತೆಗೆ ಮನೆಗಳ ಬಳಿ ಬಂದು ಗೇಟ್, ಗೋಡೆ ಹಾಗೂ ತೆಂಗಿನ ಮರ ನಾಶಗೊಳಿಸುವ ಮೂಲಕ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಈಗ ಆನೆ ಸೆರೆಗೆ ಕಾರ್ಯಾಚರಣೆ ಆರಂಭವಾಗಿದೆ.
ಕಾಡಾನೆ ತುಳಿದು ವ್ಯಕ್ತಿ ಸಾವು: ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ತೋಕೆರೆ ಸಮೀಪ ನಡೆದಿದೆ. ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದ ಚೆನ್ನ ಮಾದಯ್ಯ (60) ಮೃತಪಟ್ಟ ದುರ್ದೈವಿ. ಚೆನ್ನಮಾದಯ್ಯ ಅನ್ಯ ಕಾರ್ಯ ನಿಮಿತ್ತ ತೋಕೆರೆ ಗ್ರಾಮಕ್ಕೆ ತೆರಳಿ ವಾಪಸ್ ಗ್ರಾಮಕ್ಕೆ ಬರುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಲಬಾಧೆಗೆ ಬೇಸತ್ತು ಅಧಿಕಾರಿ ನಾಪತ್ತೆ:ಸಾಲಬಾಧೆ ಅಧಿಕಾರಿಯೊಬ್ಬರು ನಾಪತ್ತೆಯಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿ ನಡೆದಿದೆ. ಚಾಮರಾಜನಗರದ ಬಾನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಜೀವೇಶ್ ಕುಮಾರ್ ಕಾಣೆಯಾದ ಅಧಿಕಾರಿ. ಬಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಕಳೆದ 20 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.
ಸಾಲದ ಒತ್ತಡ ತಡೆಯಲು ಆಗುತ್ತಿಲ್ಲ, ನನ್ನನ್ನು ಹುಡುಕಬೇಡಿ, ಎಲ್ಲರಿಗೂ ಧನ್ಯವಾದಗಳು ಎಂದು ಪತ್ರ ಬರೆದಿಟ್ಟು ಗುರುವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರನ್ನು ಹುಡುಕಿ ಕೊಡುವಂತೆ ಸಂತೇಮರಹಳ್ಳಿ ಠಾಣೆಗೆ ಕುಟುಂಬಸ್ಥರು ದೂರು ಕೊಟ್ಟಿದ್ದು, ಈ ಸಂಬಂಧ ಪ್ರಕರಣವೂ ದಾಖಲಾಗಿದೆ. ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.
ಇದನ್ನೂ ಓದಿ:ಕೊಡಗು: ಕಾಡಾನೆ ದಾಳಿಗೆ ಟ್ರ್ಯಾಕ್ಟರ್ ಚಾಲಕ ಬಲಿ